ಬೆಂಗಳೂರು: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವ ಪರಿಣಾಮ ಇದೀಗ ಸಾಮಾನ್ಯ ಜನರ ಬದುಕಿನ ಜೊತೆಗೆ ರಾಜ್ಯದ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳ ಮೇಲೂ ಗಂಭೀರ ಪರಿಣಾಮ ಬೀರಲು ಆರಂಭಿಸಿದೆ. ಅದರಲ್ಲೂ ಬೆಂಗಳೂರಿನ ಹೆಮ್ಮೆಯ ನಮ್ಮ ಮೆಟ್ರೋ ಯೋಜನೆಗೆ ಈ ಬೆಳವಣಿಗೆ ಭಾರೀ ಆರ್ಥಿಕ ಹೊಡೆತ ಎಂನೀಡುತ್ತಿದೆ.
ಹೌದು... ಬೆಂಗಳೂರು ಮೆಟ್ರೋ ಹಂತ–2A ಮತ್ತು ಹಂತ–2B ಮಾರ್ಗಗಳ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಅಂದರೆ ಬಿಎಂಆರ್ಸಿಎಲ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ ಪಡೆದಿರುವ 500 ಮಿಲಿಯನ್ ಡಾಲರ್ ಸಾಲದ ಮರುಪಾವತಿಯನ್ನು ಜೂನ್ 1ರಿಂದ ಆರಂಭಿಸಿದೆ.
ಆದರೆ ಇಲ್ಲಿ ದೊಡ್ಡ ಸಮಸ್ಯೆ ಏನೆಂದರೆ, 2021ರಲ್ಲಿ ಈ ಸಾಲ ಒಪ್ಪಂದಕ್ಕೆ ಸಹಿ ಹಾಕಿದಾಗ ಒಂದು ಅಮೆರಿಕನ್ ಡಾಲರ್ ಮೌಲ್ಯ ಸುಮಾರು 75 ರೂಪಾಯಿಗಳಷ್ಟಿತ್ತು. ಆದರೆ ಈಗ ಡಾಲರ್ ಮೌಲ್ಯ 95 ರೂಪಾಯಿಗಳ ಗಡಿ ತಲುಪಿದ್ದು, ಕೇವಲ ನಾಲ್ಕು ವರ್ಷಗಳಲ್ಲಿ ಸುಮಾರು 20 ರೂಪಾಯಿಗಳಷ್ಟು ಏರಿಕೆಯಾಗಿದೆ.
ಇದರ ಪರಿಣಾಮವಾಗಿ ಬಿಎಂಆರ್ಸಿಎಲ್ ಈಗ ಸಾಲ ಪಡೆದಾಗಿಗಿಂತ ಪ್ರತಿ ಡಾಲರ್ ಮರುಪಾವತಿಗೆ ಹೆಚ್ಚುವರಿ 20 ರೂಪಾಯಿಗಳಷ್ಟು ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಂದರೆ ಅಸಲು ಮತ್ತು ಬಡ್ಡಿ ಎರಡೂ ಸೇರಿ ಸಂಸ್ಥೆಯ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ.
ಇನ್ನೂ ಆತಂಕಕಾರಿ ವಿಷಯವೆಂದರೆ, ಈ ಎರಡು ಮೆಟ್ರೋ ಕಾರಿಡಾರ್ಗಳು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಯಾವುದೇ ಆದಾಯವನ್ನು ಸೃಷ್ಟಿಸುತ್ತಿಲ್ಲ. ಆದಾಯ ಇಲ್ಲದಿದ್ದರೂ ಸಾಲ ಮರುಪಾವತಿ ಪ್ರಾರಂಭವಾಗಿರುವುದರಿಂದ ಬಿಎಂಆರ್ಸಿಎಲ್ ಆರ್ಥಿಕ ನಿರ್ವಹಣೆಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.
2024-25ರ ವಾರ್ಷಿಕ ವರದಿಯ ಪ್ರಕಾರ, ಮಂಜೂರಾದ 500 ಮಿಲಿಯನ್ ಡಾಲರ್ ಸಾಲದಲ್ಲಿ ಈಗಾಗಲೇ 335.12 ಮಿಲಿಯನ್ ಡಾಲರ್ ಹಣವನ್ನು ಬಿಎಂಆರ್ಸಿಎಲ್ ಪಡೆದುಕೊಂಡಿದ್ದು, ಅದರ ಮೌಲ್ಯ ಸುಮಾರು 2,748 ಕೋಟಿ ರೂಪಾಯಿಗಳಷ್ಟಿದೆ.
ಒಟ್ಟು 3,750 ಕೋಟಿ ರೂಪಾಯಿಗಳ ಅಂದಾಜು ಸಾಲವನ್ನು 25 ವರ್ಷಗಳ ಅವಧಿಯಲ್ಲಿ ಮರುಪಾವತಿಸಬೇಕಿದ್ದು, ಡಿಸೆಂಬರ್ 2045ರವರೆಗೆ ಕಂತುಗಳ ರೂಪದಲ್ಲಿ ಪಾವತಿಸಲಾಗುತ್ತದೆ. ಐದು ವರ್ಷಗಳ ವಿನಾಯಿತಿ ಅವಧಿ ಮುಗಿದಿರುವ ಕಾರಣ ಇದೀಗ ಮರುಪಾವತಿಯ ಹೊರೆ ಅಧಿಕೃತವಾಗಿ ಆರಂಭವಾಗಿದೆ.
ರೂಪಾಯಿ ಮೌಲ್ಯ ಇದೇ ರೀತಿ ಕುಸಿಯುತ್ತಾ ಹೋದರೆ, ಮುಂದಿನ ವರ್ಷಗಳಲ್ಲಿ ಬಿಎಂಆರ್ಸಿಎಲ್ ಮೇಲೆ ಇನ್ನಷ್ಟು ಸಾವಿರಾರು ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ಹೀಗಾಗಿ ಪ್ರಶ್ನೆ ಒಂದೇ...ರೂಪಾಯಿ ಮೌಲ್ಯದ ಕುಸಿತದಿಂದ ನಮ್ಮ ಮೆಟ್ರೋ ಯೋಜನೆಯ ವೆಚ್ಚ ಇನ್ನಷ್ಟು ಹೆಚ್ಚಾಗುತ್ತದೆಯೇ?ಅಥವಾ ಸರ್ಕಾರ ಈ ಆರ್ಥಿಕ ಸವಾಲಿಗೆ ಪರ್ಯಾಯ ಮಾರ್ಗ ಹುಡುಕುತ್ತದೆಯೇ?
ಈ ಬೆಳವಣಿಗೆಗಳ ಮೇಲೆ ಈಗ ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯದ ಜನರ ಕಣ್ಣು ನೆಟ್ಟಿದೆ.