ಕೋಲಾರ: ವರದಕ್ಷಿಣೆ ಕಿರುಕುಳದ ಆರೋಪಗಳ ನಡುವೆಯೇ ಯುವ ವಿವಾಹಿತೆಯೊಬ್ಬರು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಹಸಾಳ ಗ್ರಾಮದಲ್ಲಿ ನಡೆದಿದೆ. ಘಟನೆ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಮೃತೆಯ ಸಾವಿನ ಹಿಂದಿನ ನಿಜಾಂಶ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ಮಹಿಳೆಯನ್ನು 24 ವರ್ಷದ ಸಹನಾ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮಂಜುನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕುಟುಂಬದವರ ಮಾಹಿತಿ ಪ್ರಕಾರ, ದಂಪತಿಗೆ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮದುವೆಯ ನಂತರದಿಂದಲೇ ಹಣಕಾಸು ವಿಚಾರವಾಗಿ ದಂಪತಿಗಳ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತಿದ್ದವು ಎನ್ನಲಾಗಿದೆ. ಈ ಸಂಬಂಧ ಹಲವು ಬಾರಿ ಕುಟುಂಬದ ಹಿರಿಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮಾತುಕತೆಗಳೂ ನಡೆದಿದ್ದವು ಎಂದು ತಿಳಿದುಬಂದಿದೆ.
ಮೃತೆಯ ಕುಟುಂಬದ ಆರೋಪದ ಪ್ರಕಾರ, ಹೆಚ್ಚುವರಿ ಹಣಕ್ಕಾಗಿ ಒತ್ತಡ ಹಾಗೂ ಕಿರುಕುಳ ಮುಂದುವರಿದಿದ್ದು, ಘಟನೆಗೆ ಕೆಲ ಗಂಟೆಗಳ ಮೊದಲು ಸಹನಾ ತನ್ನ ತಾಯಿಗೆ ವಿಡಿಯೋ ಕರೆ ಮಾಡಿ ತಾನು ಹಲ್ಲೆಗೆ ಒಳಗಾಗುತ್ತಿರುವುದಾಗಿ ತಿಳಿಸಿದ್ದಳು ಎನ್ನಲಾಗಿದೆ.
ನಂತರ ರಾತ್ರಿ ವೇಳೆ ಮನೆಯಲ್ಲಿ ನಡೆದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಸಹನಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೃತೆಯ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಹತ್ಯೆ ಎಂದು ಆರೋಪಿಸುತ್ತಿದ್ದು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದ್ದು, ಮರಣದ ನಿಖರ ಕಾರಣ ಹಾಗೂ ಆರೋಪಗಳ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ.