ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ಸಂಭವಿಸಿದೆ. ಪತ್ನಿಯ ಕಣ್ಣೆದುರೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಯಲಹಂಕ ನ್ಯೂ ಟೌನ್ನಲ್ಲಿ ನಡೆದಿದೆ.
ಚರಣ್ (35) ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ಇವರು 'ಧಣಿ ಪ್ರಾಪರ್ಟಿಸ್' ಸಂಸ್ಥೆಯ ಮಾಲೀಕರಾಗಿದ್ದರು. ಎಂದಿನಂತೆ ತಮ್ಮ ಕಚೇರಿಗೆ ಆಗಮಿಸುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ನಾಲ್ಕೈದು ಮಂದಿಯ ತಂಡ ಏಕಾಏಕಿ ಚರಣ್ ಅವರ ಮೇಲೆ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ, ಕೊಲೆಗೈದ ಬಳಿಕ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಸುಮಾರು 10:45ರ ವೇಳೆಗೆ ಈ ಭೀಕರ ಕೃತ್ಯ ನಡೆದಿದೆ. ಎಲ್ಲವೂ ಕಣ್ಣೆದುರೇ ನಡೆಯುತ್ತಿದ್ದರೂ ಪತ್ನಿ ಏನೂ ಮಾಡಲಾಗದ ಸ್ಥಿತಿಯಲ್ಲಿ ಭಯಾನಕ ಘಟನೆಯನ್ನು ಕಣ್ಣಾರೆ ಕಂಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಯಲಹಂಕ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಹಳೇ ವೈಷಮ್ಯವೇ ಕಾರಣವಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಕೊಲೆಯ ಹಿಂದಿನ ನೈಜ ಕಾರಣ ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಹಾಡಹಗಲೇ ನಡೆದ ಈ ಬರ್ಬರ ಹತ್ಯೆ ಯಲಹಂಕದಲ್ಲಿ ಆತಂಕ ಮೂಡಿಸಿದ್ದು, ಹಾಡಹಗಲೇ ಉದ್ಯಮಿಯನ್ನೇ ಗುರಿಯಾಗಿಸಿಕೊಂಡ ದುಷ್ಕರ್ಮಿಗಳು ಯಾರು? ಕೊಲೆಗೆ ಅಸಲಿ ಕಾರಣವೇನು? ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ತಾಜಾ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com
📲 ಸುದ್ದಿಗಳನ್ನು ಶೇರ್ ಮಾಡಿ, ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ. ಕರ್ನಾಟಕದ ಪ್ರತಿಯೊಂದು ಸುದ್ದಿಯ ಕ್ಷಣಕ್ಷಣದ ಅಪ್ಡೇಟ್ಗಾಗಿ ನಮ್ಮೊಂದಿಗೆ ಇರಿ!
Tags:#Yelahanka #BengaluruCrime #BengaluruMurder #BreakingNews #KarnatakaNews #YelahankaMurder #CrimeNews #KarunaaduTimes #ಕರುನಾಡುಟೈಮ್ಸ್ #ಬೆಂಗಳೂರುಸುದ್ದಿ #ಯಲಹಂಕ