ಚಿಕ್ಕಮಗಳೂರು: ನಗರದ ಹೊರವಲಯದಲ್ಲಿರುವ ಪವಿತ್ರವನದ ನಿರ್ಜನ ಪ್ರದೇಶದಲ್ಲಿ ನರ್ಸಿಂಗ್ ವಿದ್ಯಾರ್ಥಿಯೊಬ್ಬನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ನವೆಂಬರ್ 7ರಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿ ಇದೀಗ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತ ವಿದ್ಯಾರ್ಥಿಯನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ರಕ್ಷಿತ್ (19) ಎಂದು ಗುರುತಿಸಲಾಗಿದೆ. ನಗರದ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವ ವೃತ್ತಿಪರ ಕಾಲೇಜಿನ ಬಾಲಕರ ವಸತಿನಿಲಯದಲ್ಲಿ ವಾಸವಿದ್ದ ರಕ್ಷಿತ್, ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ.
ನವೆಂಬರ್ 7ರಂದು ಹಾಸ್ಟೆಲ್ನಿಂದ ಹೊರಹೋದ ರಕ್ಷಿತ್ ನಾಪತ್ತೆಯಾಗಿದ್ದ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕುಟುಂಬಸ್ಥರು ಹಾಗೂ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಆದರೆ, ಇಂದು ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಸಮೀಪದ ಪವಿತ್ರವನದ ನಿರ್ಜನ ಪ್ರದೇಶದಲ್ಲಿ ರಕ್ಷಿತ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಸ್ಥಿತಿಯನ್ನು ಗಮನಿಸಿದರೆ ಹಲವು ದಿನಗಳ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸಾವಿನ ಸುತ್ತ ಹಲವು ಪ್ರಶ್ನೆಗಳು!
ರಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ? ಅಥವಾ ಆತನ ಸಾವಿನ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ? ಎಂಬ ಪ್ರಶ್ನೆಗಳು ಇದೀಗ ಮೂಡಿವೆ. ಸದ್ಯ ಮೃತದೇಹ ಪತ್ತೆಯಾದ ಸ್ಥಳದ ಪರಿಶೀಲನೆ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
ನಾಪತ್ತೆಯಾಗಿದ್ದ ಯುವಕನ ಸಾವು ಕುಟುಂಬಸ್ಥರಿಗೆ ಆಘಾತ ತಂದಿದ್ದು, ಪ್ರಕರಣದ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ: ನವೀನ್ ಕುಮಾರ್
📰 ಇನ್ನಷ್ಟು ಸ್ಥಳೀಯ ಮತ್ತು ರಾಜ್ಯದ ಕ್ಷಣಕ್ಷಣದ ಸುದ್ದಿಗಳಿಗಾಗಿ ಭೇಟಿ ನೀಡಿ:
🌐 www.karunaadutimes.com
📲 ಸುದ್ದಿಗಳನ್ನು ಓದಿ, ಹಂಚಿಕೊಳ್ಳಿ – ನಾಡಿನ ಸುದ್ದಿಗೆ ನಿಮ್ಮ ನೆಚ್ಚಿನ ವೇದಿಕೆ ಕರುನಾಡು ಟೈಮ್ಸ್!