ದಾವಣಗೆರೆ: ಹೆತ್ತು ಹೊತ್ತು ಸಾಕಿದ ತಾಯಿಯ ಮೇಲೆಯೇ ಮಗನೊಬ್ಬ ಕ್ರೌರ್ಯ ಮೆರೆದಿದ್ದಾನೆ. ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ 70 ವರ್ಷದ ವೃದ್ಧ ತಾಯಿಯನ್ನು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ಈಗಾಗಲೇ ಕೊಲೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿ, ಕೇವಲ ಮೂರು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಮಗನೇ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಮಗನ ಮೇಲಿಟ್ಟಿದ್ದ ಪ್ರೀತಿಯೇ ಮುಳುವಾಯಿತೇ?
ಕೊಲೆಯಾದ ವೃದ್ಧೆಯನ್ನು ಬುಳ್ಳಮ್ಮ (70) ಎಂದು ಗುರುತಿಸಲಾಗಿದೆ. ಹನುಮಂತಪ್ಪ (35) ಕೊಲೆ ಆರೋಪಿಯಾಗಿದ್ದಾನೆ. ಪತಿ ಮೃತಪಟ್ಟ ಬಳಿಕ ಹತ್ತು ಮಕ್ಕಳನ್ನು ಸಾಕಿ ಸಲಹಿದ್ದ ಬುಳ್ಳಮ್ಮ, ತನ್ನ ಒಂಬತ್ತು ಹೆಣ್ಣುಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದರು. ಮಗನ ಮೇಲೆ ಅಪಾರ ಪ್ರೀತಿ ಹೊಂದಿದ್ದ ಆಕೆಗೆ ಕೊನೆಗಾಲದಲ್ಲಿ ನೆಮ್ಮದಿಯ ಬದುಕು ಸಿಗಬೇಕಿತ್ತು. ಆದರೆ ಮಗನ ಅಪರಾಧ ಕೃತ್ಯಗಳು ಆಕೆಯ ಬದುಕನ್ನೇ ನರಕವಾಗಿಸಿದ್ದವು.
ಹನುಮಂತಪ್ಪ ಈ ಹಿಂದೆಯೂ ಹಣದ ವಿಚಾರವಾಗಿ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಮಗ ಜೈಲಿಗೆ ಹೋದ ನೋವಿನಿಂದ ಬುಳ್ಳಮ್ಮ ಹಾಸಿಗೆ ಹಿಡಿದಿದ್ದರು. ಬಳಿಕ ಆತನ ಒಂಬತ್ತು ಸಹೋದರಿಯರು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ, ಮೂರು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಆತನನ್ನು ಜೈಲಿನಿಂದ ಹೊರಗೆ ಕರೆತಂದಿದ್ದರು.
ಮದ್ಯದ ಹಣಕ್ಕಾಗಿ ನಡೆದ ಘೋರ ಕೃತ್ಯ!
ಜೈಲಿನಿಂದ ಬಿಡುಗಡೆಯಾದ ಬಳಿಕ ಹನುಮಂತಪ್ಪ ದಾವಣಗೆರೆಯ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ತಾಯಿಯನ್ನು ನೋಡಬೇಕೆಂಬ ಆಸೆಯಿಂದ ಬುಳ್ಳಮ್ಮ ಎರಡು ದಿನಗಳ ಹಿಂದೆ ಆತನನ್ನು ಮನೆಗೆ ಕರೆಸಿಕೊಂಡಿದ್ದರು. ಕಳೆದ ರಾತ್ರಿ ಅಕ್ಕನ ಮನೆಯಲ್ಲಿ ಚಿಕನ್ ಸಾರು ಮತ್ತು ರೊಟ್ಟಿ ಸೇವಿಸಿದ ಹನುಮಂತಪ್ಪ, ತಾಯಿಯನ್ನು ಮಾತನಾಡಿಸಿಕೊಂಡು ಬರುವುದಾಗಿ ಹೇಳಿ ತೆರಳಿದ್ದ.
ಈ ನಡುವೆ ಬುಳ್ಳಮ್ಮ ಎರಡು ದಿನಗಳ ಹಿಂದೆ 6,000 ರೂಪಾಯಿ ಹಣವನ್ನು ಬಿಡಿಸಿಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ವಿಚಾರ ತಿಳಿದಿದ್ದ ಹನುಮಂತಪ್ಪ ವಿಪರೀತ ಮದ್ಯಪಾನ ಮಾಡಿ ತಾಯಿಯ ಬಳಿ ಹಣ ಕೇಳಿದ್ದಾನೆ. ಆದರೆ ಕುಡಿತಕ್ಕೆ ಹಣ ವ್ಯರ್ಥ ಮಾಡುತ್ತಾನೆ ಎಂಬ ಕಾರಣಕ್ಕೆ ಬುಳ್ಳಮ್ಮ ಹಣ ನೀಡಲು ನಿರಾಕರಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಹನುಮಂತಪ್ಪ ದೊಣ್ಣೆಯಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಬುಳ್ಳಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಕೃತ್ಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಮೃತದೇಹವನ್ನು ಬೆಡ್ಶೀಟ್ನಿಂದ ಮುಚ್ಚಿ ಆತ ಅಲ್ಲಿಂದ ತೆರಳಿದ್ದಾನೆ.
ಅಕ್ಕನ ಅನುಮಾನದಿಂದ ಬಯಲಾದ ಕೊಲೆ ಪ್ರಕರಣ!
ತಾಯಿಯನ್ನು ಮಾತನಾಡಿಸಿಕೊಂಡು ಬರುತ್ತೇನೆಂದು ಹೋದ ಹನುಮಂತಪ್ಪ ಬಹಳ ಹೊತ್ತಾದರೂ ವಾಪಸ್ ಬಾರದಿದ್ದರಿಂದ ಅನುಮಾನಗೊಂಡ ಆತನ ಅಕ್ಕ ಶಾರದಮ್ಮ ಮನೆಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ತಾಯಿ ಕೊಲೆಯಾಗಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಸಿ ಹನುಮಂತಪ್ಪನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಸವಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಮಲ್ಲಮ್ಮ ಚೌಬೇ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆತ್ತು ಹೊತ್ತು ಸಾಕಿದ ತಾಯಿಯನ್ನೇ ಮದ್ಯದ ಹಣಕ್ಕಾಗಿ ಕೊಂದ ಮಗನ ಕೃತ್ಯ ದೊಡ್ಡಘಟ್ಟ ಗ್ರಾಮದಲ್ಲಿ ಆಘಾತ ಮೂಡಿಸಿದೆ. ಮಗನನ್ನು ಜೈಲಿನಿಂದ ಹೊರತರಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಸಹೋದರಿಯರ ಕುಟುಂಬಕ್ಕೂ ಈ ಘಟನೆ ಬರಸಿಡಿಲಿನಂತೆ ಎರಗಿದೆ.
ವರದಿ: ನವೀನ್ ಕುಮಾರ್
---
🌐 ಇನ್ನಷ್ಟು ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ:
🔗 www.karunaadutimes.com
Tags:#Davanagere #Channagiri #Doddghatta #MotherMurder #SonKillsMother #CrimeNews #KarnatakaCrime #BasavapatnaPolice #DavanagereNews #ಮಗನಿಂದತಾಯಿಹತ್ಯೆ #ತಾಯಿಕೊಲೆ #ದಾವಣಗೆರೆಸುದ್ದಿ #ಚನ್ನಗಿರಿ #ದೊಡ್ಡಘಟ್ಟ #ಕರ್ನಾಟಕಸುದ್ದಿ #ಕ್ರೈಂನ್ಯೂಸ್ #ಕರ್ನಾಟಕಟೈಮ್ಸ್