ಬೆಂಗಳೂರು: ಹತ್ತು ವರ್ಷಗಳ ಪ್ರೀತಿ, ಐದು ವರ್ಷಗಳ ದಾಂಪತ್ಯ ಜೀವನ... ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎಂದುಕೊಂಡಿದ್ದ ಮಹಿಳೆಗೆ ಪತಿಯ ಮತ್ತೊಂದು ಮದುವೆಯ ವಿಚಾರ ಬರಸಿಡಿಲಿನಂತೆ ಅಪ್ಪಳಿಸಿದೆ. ತನ್ನನ್ನು ಮದುವೆಯಾಗಿದ್ದ ಪತಿ, ಗುಟ್ಟಾಗಿ ಇಬ್ಬರು ಮಕ್ಕಳಿರುವ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನ್ಯಾಯಕ್ಕಾಗಿ ಸಂತ್ರಸ್ತ ಮಹಿಳೆ ಇದೀಗ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಮೆಟ್ಟಿಲೇರಿದ್ದಾರೆ.
ಹೌದು, ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಸದಾಕತ್ ಅಲಿ ಎಂಬಾತ ತನ್ನನ್ನು ಪ್ರೀತಿಸಿ ಮದುವೆಯಾದ ಬಳಿಕ ಮತ್ತೊಂದು ಮದುವೆಯಾಗಿದ್ದಾನೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ಸಂತ್ರಸ್ತ ಮಹಿಳೆಗೆ ತಂದೆ-ತಾಯಿ ಯಾರೂ ಇರಲಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಕಾವಲಭೈರಸಂದ್ರದಲ್ಲಿ ಸ್ನೇಹಿತರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮೊಹಮ್ಮದ್ ಸದಾಕತ್ ಅಲಿಯ ಪರಿಚಯವಾಗಿತ್ತು. ಆರಂಭದಲ್ಲಿ ಸ್ನೇಹವಾಗಿದ್ದ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು. ಇಬ್ಬರೂ ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿದ ಬಳಿಕ ಐದು ವರ್ಷಗಳ ಹಿಂದೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದರು ಎನ್ನಲಾಗಿದೆ.
ಈ ಮದುವೆಗೆ ಅನಿಲ್ ಕುಮಾರ್ ಹಾಗೂ ಅವರ ಪತ್ನಿ ಸಾಕ್ಷಿಗಳಾಗಿ ಸಹಿ ಹಾಕಿದ್ದರು. ಆದರೆ, ಮದುವೆಯ ವಿಚಾರವನ್ನು ಸದಾಕತ್ ತನ್ನ ಕುಟುಂಬದವರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ಬಳಿಕ ಕಲ್ಯಾಣನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ದಂಪತಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು.
ಆದರೆ, ಕಳೆದ ಒಂದು ತಿಂಗಳಿಂದ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಸದಾಕತ್ ಮನೆಗೆ ಬರುವುದನ್ನೇ ಕಡಿಮೆ ಮಾಡಿದ್ದರಿಂದ ಪತ್ನಿಗೆ ಅನುಮಾನ ಶುರುವಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಸಂದರ್ಭದಲ್ಲಿ ಪತಿ ಮತ್ತೊಂದು ಮದುವೆಯಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಸದಾಕತ್ ಈಗಾಗಲೇ ಇಬ್ಬರು ಮಕ್ಕಳಿರುವ ಮತ್ತೊಬ್ಬ ಮಹಿಳೆಯನ್ನು ಸುಮಾರು ಒಂದು ತಿಂಗಳ ಹಿಂದೆ ವಿವಾಹವಾಗಿದ್ದಾನೆ ಎನ್ನಲಾಗಿದೆ. ಹತ್ತು ವರ್ಷಗಳ ಪ್ರೀತಿ, ಐದು ವರ್ಷಗಳ ಸಂಸಾರ ನಡೆಸಿದ ಪತಿ ಮತ್ತೊಂದು ಮದುವೆಯಾಗಿರುವ ವಿಚಾರ ತಿಳಿದು ಮಹಿಳೆ ಆಘಾತಕ್ಕೊಳಗಾಗಿದ್ದಾರೆ.
ಈ ಸಂಬಂಧ ಸಂತ್ರಸ್ತೆ ಮೊದಲಿಗೆ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಆರೋಪ. ಹೀಗಾಗಿ ಇದೀಗ ನಗರ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ, ಹತ್ತು ವರ್ಷಗಳ ಪ್ರೀತಿಯಿಂದ ಆರಂಭವಾದ ಸಂಬಂಧದಲ್ಲಿ ಮತ್ತೊಂದು ಮದುವೆಯ ಆರೋಪ ಹೊಸ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ? ಎರಡನೇ ಮದುವೆಯ ಆರೋಪದ ಹಿಂದಿರುವ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಬ್ರೇಕಿಂಗ್ ನ್ಯೂಸ್ ಹಾಗೂ ಸಮಗ್ರ ಸುದ್ದಿಗಳಿಗಾಗಿ ಈಗಲೇ ಭೇಟಿ ನೀಡಿ:
www.karunaadutimes.com
Tags:#Bengaluru #BengaluruNews #HennurPolice #SadakathAli #MarriageDispute #CheatingAllegation #SecondMarriage #KannadaNews #KarnatakaNews #ಬೆಂಗಳೂರು #ಹೆಣ್ಣೂರು #ವಂಚನೆಆರೋಪ #ಎರಡನೇಮದುವೆ #ಕರ್ನಾಟಕಸುದ್ದಿ #KarunaaduTimes