ಖಾಕಿ ಯಡವಟ್ಟಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ ನಿರಪರಾಧಿ! ಕೊಲೆಯಾದಳೆಂದ ಮಹಿಳೆ ಜೀವಂತ ಪ್ರತ್ಯಕ್ಷ!
ಮಂಡ್ಯ: ಒಂದು ಫೋನ್ ಕರೆ ಆಧಾರವಾಗಿ ಕೊಲೆ ಆರೋಪ ಹೊರಿಸಿ, ಅಮಾಯಕ ಯುವಕನನ್ನು ಜೈಲಿಗೆ ಕಳುಹಿಸಿದ ಆರೋಪ. ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಯುವಕ. ಆದರೆ, ಕೊಲೆಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದ ಮಹಿಳೆಯೇ ಇದೀಗ ಜೀವಂತವಾಗಿ ಪ್ರತ್ಯಕ್ಷಳಾಗಿದ್ದಾಳೆ. ಇದರಿಂದಾಗಿ ಅಂದಿನ ಪೊಲೀಸ್ ತನಿಖೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೀಡಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿರುವ ಈ ಪ್ರಕರಣ ಪೊಲೀಸ್ ತನಿಖೆಯಲ್ಲಿನ ಗಂಭೀರ ಲೋಪಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಮಹಿಳೆಯೊಬ್ಬಳ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ, ಯಾವುದೇ ದೃಢವಾದ ಸಾಕ್ಷ್ಯಗಳಿಲ್ಲದೆ ಯುವಕನೊಬ್ಬನನ್ನು ಆರೋಪಿಯನ್ನಾಗಿ ಮಾಡಲಾಗಿತ್ತೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಏನಿದು ಪ್ರಕರಣ?
2019ರಲ್ಲಿ ಪಾಂಡವಪುರ ಪಟ್ಟಣದ ಮಂಜು ಎಂಬ ಮಹಿಳೆ ದಿಢೀರನೆ ನಾಪತ್ತೆಯಾಗಿದ್ದಳು. ಈ ಸಂಬಂಧ ಆಕೆಯ ತಂದೆ ನಾಗರಾಜು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಸುದೀರ್ಘ ಸಮಯ ಕಳೆದರೂ ಮಹಿಳೆಯ ಸುಳಿವು ಪತ್ತೆಯಾಗಿರಲಿಲ್ಲ ಎನ್ನಲಾಗಿದೆ.
ಇದರ ನಡುವೆ 2021ರಲ್ಲಿ ರಾಗಿಮುದ್ದನಹಳ್ಳಿಯ ನಿವಾಸಿ ರಾಜೇಶ್ ಪೊಲೀಸರ ತನಿಖೆಯ ವ್ಯಾಪ್ತಿಗೆ ಬಂದಿದ್ದ. ಇದಕ್ಕೆ ಕಾರಣವಾಗಿದ್ದು, ಮಂಜು ನಾಪತ್ತೆಯಾಗುವ ಮುನ್ನ ಪಾಂಡವಪುರ ಬಸ್ ನಿಲ್ದಾಣದಲ್ಲಿ ಅಪರಿಚಿತರೊಬ್ಬರಿಂದ ಮೊಬೈಲ್ ಪಡೆದು ಮಾಡಿದ್ದ ಕರೆ. ಆ ಮೊಬೈಲ್ ರಾಜೇಶ್ಗೆ ಸೇರಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಆದರೆ, ಕೇವಲ ಒಂದು ಫೋನ್ ಕರೆಯನ್ನೇ ಆಧಾರವಾಗಿಟ್ಟುಕೊಂಡು ರಾಜೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಮಂಜುವನ್ನು ಕೊಲೆ ಮಾಡಿರುವುದಾಗಿ ಆರೋಪಿಸಲಾಯಿತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಪಡೆದ ಆರೋಪ!
ರಾಜೇಶ್ ನೀಡಿರುವ ಆರೋಪದ ಪ್ರಕಾರ, ಪೊಲೀಸ್ ವಿಚಾರಣೆ ವೇಳೆ ಆತನಿಗೆ ಅಮಾನುಷವಾಗಿ ಹಿಂಸೆ ನೀಡಲಾಗಿತ್ತು. ಬೂಟುಗಾಲಿನಿಂದ ತುಳಿಯುವುದು, ವಿದ್ಯುತ್ ಶಾಕ್ ನೀಡುವುದು ಹಾಗೂ ಕುಟುಂಬದವರನ್ನೂ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.
ಈ ಒತ್ತಡಕ್ಕೆ ಮಣಿದು ತಾನು ಮಾಡದ ಕೊಲೆಯನ್ನು ಒಪ್ಪಿಕೊಂಡು ಹೇಳಿಕೆ ನೀಡುವಂತಾಯಿತು ಎಂಬುದು ರಾಜೇಶ್ ಪರದ ಆರೋಪವಾಗಿದೆ. ಬಳಿಕ 2021ರಲ್ಲಿ ಆತ ಜೈಲು ಸೇರಿದ್ದ.
ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಜೈಲಿನಲ್ಲಿ ಕಳೆದ ರಾಜೇಶ್, 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಆದರೆ, ಕೊಲೆ ಆರೋಪಿಯೆಂಬ ಕಳಂಕ ಮಾತ್ರ ಆತನನ್ನು ಕಾಡುತ್ತಲೇ ಇತ್ತು.
ನಾಗಮಂಗಲದಲ್ಲಿ ಜೀವಂತವಾಗಿ ಪತ್ತೆಯಾದ ಮಂಜು!
ತನ್ನ ಕಕ್ಷಿದಾರನ ಮೇಲಿನ ಆರೋಪದ ಸತ್ಯಾಸತ್ಯತೆ ಬಯಲಿಗೆಳೆಯಲು ಮುಂದಾದ ರಾಜೇಶ್ ಪರ ವಕೀಲ ನಟೇಶ್, ಪ್ರಕರಣದ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕಿದ್ದಾರೆ. ಈ ವೇಳೆ ನಾಗಮಂಗಲದಲ್ಲಿ ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಂಜುವನ್ನು ಜೀವಂತವಾಗಿ ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.
ಬಳಿಕ ಆಕೆಯನ್ನು ಬಿಂಡಿಗನವಿಲೆ ಪೊಲೀಸರ ವಶಕ್ಕೆ ಒಪ್ಪಿಸಿ ಹೇಳಿಕೆ ದಾಖಲಿಸಲಾಗಿದೆ. ಪೊಲೀಸರ ಮುಂದೆ ಮಂಜು ನೀಡಿರುವ ಹೇಳಿಕೆ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿದ್ದರಿಂದ ಬೇಸರಗೊಂಡು ತಾನೇ ಮನೆಯಿಂದ ಹೊರಹೋಗಿದ್ದೆ. ಇದೀಗ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದೇನೆ ಎಂದು ಆಕೆ ಹೇಳಿರುವುದಾಗಿ ವರದಿಯಾಗಿದೆ.
ಅಷ್ಟೇ ಅಲ್ಲದೆ, ರಾಜೇಶ್ ಎಂಬ ವ್ಯಕ್ತಿ ಯಾರೆಂಬುದೇ ನನಗೆ ತಿಳಿದಿಲ್ಲ. ಆತನಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ ಎನ್ನಲಾಗಿದೆ.
ರಾಜೇಶ್ಗೆ ನ್ಯಾಯ ಸಿಗುತ್ತಾ? ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ?
ಮಹಿಳೆ ಜೀವಂತವಾಗಿ ಪತ್ತೆಯಾಗಿರುವುದು ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿದೆ. ಆದರೆ, ಈ ಪ್ರಕರಣದಲ್ಲಿ ಹಲವು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಮಹಿಳೆಯ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲು ಕಾರಣವೇನು? ಕೇವಲ ಮೊಬೈಲ್ ಕರೆಯ ಆಧಾರದಲ್ಲಿ ಯುವಕನನ್ನು ಕೊಲೆ ಆರೋಪಿಯನ್ನಾಗಿ ಮಾಡಿದ್ದು ಏಕೆ? ವಿಚಾರಣೆ ವೇಳೆ ಹಿಂಸೆ ನೀಡಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತದೆಯೇ?
ಎಲ್ಲಕ್ಕಿಂತ ಮುಖ್ಯವಾಗಿ, ಮಾಡದ ತಪ್ಪಿಗೆ ಎರಡೂವರೆ ವರ್ಷಗಳ ಕಾಲ ಜೈಲಿನಲ್ಲಿ ಕಳೆದ ರಾಜೇಶ್ಗೆ ನ್ಯಾಯ ದೊರೆಯುತ್ತದೆಯೇ ಎಂಬುದು ಈಗಿನ ದೊಡ್ಡ ಪ್ರಶ್ನೆ.
ಒಬ್ಬ ವ್ಯಕ್ತಿಯ ಬದುಕು, ಕುಟುಂಬದ ಗೌರವ ಮತ್ತು ಭವಿಷ್ಯವನ್ನೇ ಪ್ರಭಾವಿಸುವ ಕೊಲೆ ಪ್ರಕರಣದ ತನಿಖೆಯಲ್ಲಿ ಇಂತಹ ಲೋಪಗಳು ನಡೆದಿದ್ದರೆ, ಅದಕ್ಕೆ ಹೊಣೆಗಾರರಾದವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಮಹಿಳೆ ಜೀವಂತವಾಗಿ ಸಿಕ್ಕಿರುವುದು ಪ್ರಕರಣದ ಒಂದು ಆಯಾಮವನ್ನು ಸ್ಪಷ್ಟಪಡಿಸಿದರೂ, ರಾಜೇಶ್ ಮೇಲಿನ ಪ್ರಕರಣದ ಕಾನೂನುಬದ್ಧ ಸ್ಥಿತಿ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ.
ವರದಿ: ನವೀನ್ ಕುಮಾರ್
---
🌐 ಇನ್ನಷ್ಟು ತಾಜಾ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ!
👉 www.karunaadutimes.com
📲 ಸುದ್ದಿಗಳನ್ನು ಓದಿ, ಹಂಚಿಕೊಳ್ಳಿ – ನಾಡಿನ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ!
Tags:#Mandya #Pandavapura #Nagamangala #Bindiganavile #RajeshCase #MissingWoman #PoliceInvestigation #WrongfulArrest #KarnatakaNews #MandyaNews #CrimeNews #JusticeForRajesh #ಕರ್ನಾಟಕಸುದ್ದಿ #ಮಂಡ್ಯಸುದ್ದಿ #ಪಾಂಡವಪುರ #ನಾಗಮಂಗಲ #ಪೊಲೀಸ್_ತನಿಖೆ #ನ್ಯಾಯಕ್ಕಾಗಿ_ಹೋರಾಟ #KarunaaduTimes