ಚಿಕ್ಕಮಗಳೂರು: ದೀಪಾವಳಿ ಹಬ್ಬದ ಬಾಡೂಟಕ್ಕಾಗಿ ವನ್ಯಜೀವಿಗಳನ್ನು ಬೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಿನ್ನಡಿ ಗ್ರಾಮದ ರಮೇಶ್ ಬಂಧಿತ ಆರೋಪಿಯಾಗಿದ್ದಾನೆ.
ದೀಪಾವಳಿ ಹಬ್ಬದ ಬಾಡೂಟಕ್ಕಾಗಿ ಕಡವೆ ಹಾಗೂ ಕಾಡುಕುರಿಯನ್ನು ಬೇಟೆಯಾಡಿದ್ದ ಆರೋಪಿಗಳು, ರಮೇಶ್ನ ಮನೆಯಲ್ಲಿ ಮಾಂಸವನ್ನು ಕತ್ತರಿಸಿ ಪರಸ್ಪರ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ.
ಅರಣ್ಯಾಧಿಕಾರಿಗಳ ದಾಳಿ ಗಮನಿಸುತ್ತಿದ್ದಂತೆ ಮಹೇಂದ್ರ, ಪ್ರಕಾಶ್ ಹಾಗೂ ಮಲ್ಲಯ್ಯ ಎಂಬುವವರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಎರಡು ನಾಡ ಬಂದೂಕುಗಳು ಹಾಗೂ ವನ್ಯಜೀವಿಗಳ ಮಾಂಸವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು, ತಲೆಮರೆಸಿಕೊಂಡಿರುವ ಇತರ ಮೂವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ವನ್ಯಜೀವಿಗಳ ಬೇಟೆ ಮತ್ತು ಅಕ್ರಮ ಮಾಂಸ ಸಾಗಣೆ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ವರದಿ: ನವೀನ್ ಕುಮಾರ್
ಕರ್ನಾಟಕದ ಸುದ್ದಿ ಕ್ಷಣಕ್ಷಣಕ್ಕೂ – www.karunaadutimes.com
🌐 ಹೆಚ್ಚಿನ ಸುದ್ದಿಗಳಿಗಾಗಿ ಭೇಟಿ ನೀಡಿ: www.karunaadutimes.com
Tags:#Chikkamagaluru #WildlifeCrime #ForestDepartment #ಕರ್ನಾಟಕಸುದ್ದಿ #KarunaaduTimes