ಕೊಪ್ಪಳ: ಚಲಿಸುತ್ತಿದ್ದ ಬಸ್ನ ಮುಂಭಾಗದ ಚಕ್ರದ ಕಮಾನ್ ಸ್ಪ್ರಿಂಗ್ ಪಟ್ಟಿಯ ನಟ್ ಏಕಾಏಕಿ ಕಿತ್ತುಹೋದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬಿಟ್ಟು ಪಕ್ಕದ ಹೊಲಕ್ಕೆ ನುಗ್ಗಿದ ಘಟನೆ ಜಿಲ್ಲೆಯ ಗಂಗಾನಾಳ ಗ್ರಾಮದ ಸಮೀಪ ನಡೆದಿದೆ. ಬಸ್ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರೂ, ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಕನಕಗಿರಿ ಮಾರ್ಗವಾಗಿ ಕೊಪ್ಪಳದತ್ತ ಸಂಚರಿಸುತ್ತಿದ್ದ ಬಸ್ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಬಸ್ ಗಂಗಾನಾಳ ಸಮೀಪ ತಲುಪುತ್ತಿದ್ದಂತೆ ಮುಂಭಾಗದ ಚಕ್ರದ ಕಮಾನ್ ಸ್ಪ್ರಿಂಗ್ ಪಟ್ಟಿಯ ನಟ್ ಕಿತ್ತುಹೋಗಿದೆ. ಇದರಿಂದ ಬಸ್ನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಲಕ್ಕೆ ನುಗ್ಗಿದೆ.
ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!
ಘಟನೆಯ ವೇಳೆ ಬಸ್ನ ವೇಗ ಕಡಿಮೆ ಇದ್ದ ಕಾರಣ ದೊಡ್ಡ ಮಟ್ಟದ ಅಪಘಾತ ಸಂಭವಿಸುವುದು ತಪ್ಪಿದೆ. ಘಟನೆಯಲ್ಲಿ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಬಸ್ ಹೊಲಕ್ಕೆ ನುಗ್ಗುತ್ತಿದ್ದಂತೆ ಸ್ಥಳೀಯರು ಹಾಗೂ ವಾಹನ ಸವಾರರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಬಸ್ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲು ನೆರವಾಗಿದ್ದಾರೆ.
40ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಅಪಾಯದಲ್ಲಿದ್ದ ಕ್ಷಣದಲ್ಲಿ ಚಾಲಕ ತೋರಿದ ಸಮಯಪ್ರಜ್ಞೆ ದೊಡ್ಡ ದುರಂತವನ್ನು ತಪ್ಪಿಸಲು ನೆರವಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಸಂಚಾರದಲ್ಲಿರುವ ಬಸ್ಗಳ ತಾಂತ್ರಿಕ ಸ್ಥಿತಿಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ!
ಚಲಿಸುತ್ತಿರುವ ಬಸ್ನ ಚಕ್ರದ ಭಾಗದಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಸಾರ್ವಜನಿಕ ಸಾರಿಗೆ ವಾಹನಗಳ ನಿರ್ವಹಣೆ ಹಾಗೂ ಸುರಕ್ಷತಾ ತಪಾಸಣೆಯ ಅಗತ್ಯವನ್ನು ಮತ್ತೊಮ್ಮೆ ಎತ್ತಿಹಿಡಿದಿದೆ.
ವರದಿ: ನವೀನ್ ಕುಮಾರ್
ಕರ್ನಾಟಕದ ಕ್ಷಣಕ್ಷಣದ ಸುದ್ದಿಗಳಿಗಾಗಿ: www.karunaadutimes.com
Tags:#Koppal #KoppalNews #BusAccident #Ganganal #Kanakagiri #BreakingNews #KarnatakaNews #KarunaaduTimes #ಕೊಪ್ಪಳ #ಕರ್ನಾಟಕಸುದ್ದಿ