ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣ: ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಮತ್ತೆ ಜಾಮೀನು ನಿರಾಕರಣೆ – ನ.17ಕ್ಕೆ ನ್ಯಾಯಾಲಯಕ್ಕೆ ಶರಣಾಗತಿ ಅನಿವಾರ್ಯ!
ಚಾಮರಾಜನಗರ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಸುಳ್ವಾಡಿ ಕಿಚ್ಗುತ್ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಇಮ್ಮಡಿ ಮಹದೇವಸ್ವಾಮಿಗೆ ನ್ಯಾಯಾಲಯದಿಂದ ಮತ್ತೊಂದು ಹಿನ್ನಡೆಯಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಪಡೆದಿದ್ದ ಮಧ್ಯಂತರ ಜಾಮೀನನ್ನು ಮುಂದುವರಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಚಾಮರಾಜನಗರ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಆರೋಗ್ಯ ಸಮಸ್ಯೆಯ ಕಾರಣದಿಂದ ಇಮ್ಮಡಿ ಮಹದೇವಸ್ವಾಮಿಗೆ ಈ ಹಿಂದೆ ಒಂದು ವರ್ಷದ ಅವಧಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು. ಈ ಜಾಮೀನಿನ ಅವಧಿ 2026ರ ನವೆಂಬರ್ 17ರಂದು ಮುಕ್ತಾಯಗೊಳ್ಳಲಿದೆ. ಅಂದು ನ್ಯಾಯಾಲಯದ ಮುಂದೆ ಶರಣಾಗುವಂತೆ ಸೂಚಿಸಲಾಗಿತ್ತು.
ಆದರೆ, ಮಧ್ಯಂತರ ಜಾಮೀನಿನ ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆ ಆರೋಪಿ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಇದೀಗ ಜಾಮೀನು ವಿಸ್ತರಣೆಗೆ ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ನವೆಂಬರ್ 17ರಂದು ನ್ಯಾಯಾಲಯಕ್ಕೆ ಶರಣಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಏನಿದು ಸುಳ್ವಾಡಿ ವಿಷ ಪ್ರಸಾದ ದುರಂತ?
2018ರ ಡಿಸೆಂಬರ್ 18ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದ ವಿಷ ಪ್ರಸಾದ ದುರಂತ ಇಡೀ ರಾಜ್ಯವನ್ನೇ ನಡುಗಿಸಿತ್ತು.
ದೇವಸ್ಥಾನದ ಆಡಳಿತದ ವಿಚಾರವಾಗಿ ನಡೆದಿದ್ದ ಸಂಚಿನ ಹಿನ್ನೆಲೆಯಲ್ಲಿ ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು ಎಂಬುದು ಪ್ರಕರಣದ ಪ್ರಮುಖ ಆರೋಪವಾಗಿದೆ. ಈ ದುರಂತದಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದರು. 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು.
ಪ್ರಕರಣದಲ್ಲಿ ಇಮ್ಮಡಿ ಮಹದೇವಸ್ವಾಮಿ ಪ್ರಮುಖ ಆರೋಪಿಯಾಗಿದ್ದು, ಈ ಘೋರ ದುರಂತದ ನೆನಪು ಇಂದಿಗೂ ಸಂತ್ರಸ್ತ ಕುಟುಂಬಗಳನ್ನು ಕಾಡುತ್ತಿದೆ.
ಇನ್ನೊಂದೆಡೆ, ಆರೋಪಿಗೆ ಮತ್ತೆ ಮಧ್ಯಂತರ ಜಾಮೀನು ನೀಡಬಾರದು ಎಂದು ಸಂತ್ರಸ್ತ ಕುಟುಂಬಸ್ಥರು ಹಾಗೂ ಘಟನೆಯಲ್ಲಿ ಅಸ್ವಸ್ಥರಾಗಿದ್ದವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಒಟ್ಟಿನಲ್ಲಿ, ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಮಧ್ಯಂತರ ಜಾಮೀನು ವಿಸ್ತರಣೆಗೆ ನ್ಯಾಯಾಲಯ ನಿರಾಕರಿಸಿರುವುದು ಸಂತ್ರಸ್ತ ಕುಟುಂಬಗಳಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ವರದಿ: ನವೀನ್ ಕುಮಾರ್
www.karunaadutimes.com
Tags:#SulwadiCase #ImmadiMahadevaswamy #SulwadiTragedy #Chamarajanagar #KarnatakaNews #BreakingNews #KarunaaduTimes #KannadaNews #CrimeNews