ಬೆಂಗಳೂರು: ಪ್ರೀತಿಸಿ ದೂರವಾದ ಬಳಿಕವೂ ಕಿರುಕುಳ ನಿಲ್ಲದ ಆರೋಪ! ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಹಣ ವಾಪಸ್ ಕೇಳಿದ ಯುವತಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಯುವತಿ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಸಂತ್ರಸ್ತ ಯುವತಿ ಕನ್ನಡ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಶರತ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ಸಂಬಂಧ ಯುವತಿ ಆತನಿಗೆ ಸುಮಾರು 2 ಲಕ್ಷ ರೂಪಾಯಿ ಹಣ ನೀಡಿದ್ದಳು. ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪ್ರೀತಿಗೆ ವಿರಾಮ ಬಿದ್ದಿತ್ತು. ಇಬ್ಬರೂ ದೂರವಾಗಿದ್ದು, ನಂತರ ಶರತ್ ಯುವತಿಯ ಸಂಪರ್ಕದಿಂದ ದೂರ ಉಳಿದಿದ್ದ ಎನ್ನಲಾಗಿದೆ.
ಆದರೆ, ನವೆಂಬರ್ 4ರಂದು ಮತ್ತೆ ಶರತ್ ಯುವತಿಯ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ತಾನು ಈ ಹಿಂದೆ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಯುವತಿ ಕೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ಶರತ್ ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಷ್ಟೇ ಅಲ್ಲ, ಯುವತಿಯ ಕಾರಿನ ಗಾಜನ್ನು ಒಡೆದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಜೊತೆಗೆ, ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಘಟನೆಯಿಂದ ಆತಂಕಗೊಂಡ ಯುವತಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಖಾಸಗಿ ಫೋಟೋಗಳ ಮೂಲಕ ಬೆದರಿಕೆ ಹಾಗೂ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಪ್ರೀತಿಯ ಹೆಸರಿನಲ್ಲಿ ನಂಬಿಕೆ ಗಳಿಸಿ, ಬಳಿಕ ಖಾಸಗಿತನಕ್ಕೆ ಧಕ್ಕೆ ತರುವ ಬೆದರಿಕೆ ಹಾಕುವುದು ಗಂಭೀರ ಅಪರಾಧ. ಇಂತಹ ಕಿರುಕುಳದ ವಿರುದ್ಧ ಸಂತ್ರಸ್ತರು ಧೈರ್ಯವಾಗಿ ದೂರು ನೀಡುವುದು ಅತ್ಯಂತ ಮುಖ್ಯ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಕ್ಷಣಕ್ಷಣದ ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadutimes.com
📲 ಕರ್ನಾಟಕದ ಪ್ರತಿಯೊಂದು ಸುದ್ದಿಯೂ ಮೊದಲು ನಿಮ್ಮ ಬೆರಳ ತುದಿಯಲ್ಲಿ!
Tags:#Bengaluru #BengaluruCrime #JuniorArtist #KannadaCinema #KannadaNews #CrimeNews #AnnapoorneshwariNagar #WomenSafety #SocialMediaThreat #KarunaaduTimes #ಕರ್ನಾಟಕಸುದ್ದಿ #ಬೆಂಗಳೂರುಸುದ್ದಿ #ಕ್ರೈಂನ್ಯೂಸ್