ಬೆಂಗಳೂರು: ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಬಳಿಕ ಅನುಮಾನ ಬಾರದಂತೆ ಮೃತರ ಮೊಬೈಲ್ಗಳಿಗೆ ಬರುತ್ತಿದ್ದ ಕರೆಗಳಿಗೆ ಬಾಲಕನಿಂದ ಉತ್ತರ ಕೊಡಿಸಿದ್ದ ಆರೋಪಿಯ ಕೃತ್ಯವನ್ನು ಬಹಿರಂಗಪಡಿಸುವ ಆಡಿಯೋವೊಂದು ಈಗ ಮಹತ್ವದ ಸಾಕ್ಷ್ಯವಾಗಿ ಹೊರಹೊಮ್ಮಿದೆ.
ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಯ ವರ್ತನೆಗೆ ಸಂಬಂಧಿಸಿದ ಹಲವು ಮಾಹಿತಿಗಳು ಲಭ್ಯವಾಗುತ್ತಿವೆ. ಕೊಲೆಗಳ ಬಳಿಕ ಮೃತರ ಮೊಬೈಲ್ಗಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಆರೋಪಿ, ಸಂಬಂಧಿಕರಿಂದ ಬರುತ್ತಿದ್ದ ಕರೆ ಹಾಗೂ ಸಂದೇಶಗಳಿಗೆ ತಾನೇ ಉತ್ತರಿಸುತ್ತಿದ್ದ ಎನ್ನುವುದು ಈ ಹಿಂದಿನ ತನಿಖೆಯಲ್ಲಿ ಗೊತ್ತಾಗಿತ್ತು. ಇದೀಗ ಬಾಲಕರನ್ನು ಬಳಸಿಕೊಂಡು ಸಂಬಂಧಿಕರ ಅನುಮಾನವನ್ನು ದೂರ ಮಾಡಲು ಯತ್ನಿಸಿದ್ದ ಸಂಗತಿಯೂ ಆಡಿಯೋ ಮೂಲಕ ಬೆಳಕಿಗೆ ಬಂದಿದೆ.
ತನಿಖೆಯ ಪ್ರಕಾರ, ಶಿವಕುಮಾರ್ ಮತ್ತು ದಿವ್ಯ ದಂಪತಿಯನ್ನು ಹತ್ಯೆ ಮಾಡಿದ ಬಳಿಕ ಅವರ ಪುತ್ರ ಪುನೀತ್ನನ್ನು ಕೆಲಕಾಲ ತನ್ನೊಂದಿಗೆ ಇರಿಸಿಕೊಂಡಿದ್ದ ಆರೋಪಿ, ಮೊಬೈಲ್ ಕರೆಗಳಿಗೆ ಆತನಿಂದ ಉತ್ತರ ಕೊಡಿಸಿದ್ದಾನೆ. ಬಳಿಕ ಪುನೀತ್ನನ್ನೂ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಶಂಕರ್ ಮತ್ತು ನಳಿನಿ ದಂಪತಿಯನ್ನು ಹತ್ಯೆ ಮಾಡಿದ ಬಳಿಕ ಅವರ ಪುತ್ರ ಯತಿನ್ನನ್ನು ಕರೆದುಕೊಂಡು ಹೋಗಿ ಸಂಬಂಧಿಕರೊಂದಿಗೆ ಮಾತನಾಡಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಟ್ರಿಪ್ಗೆ ಬಂದಿದ್ದೇವೆ, ಅಪ್ಪ-ಅಮ್ಮ ಬಸ್ನಲ್ಲಿದ್ದಾರೆ ಎಂದ ಬಾಲಕ!
ಸದ್ಯ ಬಹಿರಂಗವಾಗಿರುವ ಆಡಿಯೋದಲ್ಲಿ ಯತಿನ್ ತನ್ನ ಸಂಬಂಧಿಕರೊಂದಿಗೆ ಮಾತನಾಡಿರುವ ಸಂಭಾಷಣೆ ಕೇಳಿಬಂದಿದೆ. ನಳಿನಿ ಮತ್ತು ಕುಟುಂಬದ ಇತರ ಸದಸ್ಯರು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಸಂಬಂಧಿಕರು ಪದೇಪದೇ ಕರೆ ಮಾಡುತ್ತಿದ್ದರು. ಈ ವೇಳೆ ಕರೆ ಸ್ವೀಕರಿಸುತ್ತಿದ್ದ ಆರೋಪಿ ಇಂದುಶೇಖರ್, ಕೆಲ ಸಂದರ್ಭಗಳಲ್ಲಿ ಫೋನ್ನ್ನು ಬಾಲಕ ಯತಿನ್ ಕೈಗೆ ಕೊಟ್ಟು ಮಾತನಾಡಿಸಿದ್ದಾನೆ ಎನ್ನಲಾಗಿದೆ.
ಸಂಭಾಷಣೆ ವೇಳೆ ಸಂಬಂಧಿಕರು, 'ನಳಿನಿ ಜೊತೆ ಒಮ್ಮೆಯಾದರೂ ಮಾತನಾಡಿಸು, ಆಕೆಯ ಧ್ವನಿ ಕೇಳಿದರೆ ಸಮಾಧಾನವಾಗುತ್ತದೆ. ಕನಿಷ್ಠ ಆಕೆಯ ತಾಯಿ ತುಂಗಮ್ಮ ಅವರೊಂದಿಗಾದರೂ ಮಾತನಾಡಿಸು. ಅವರು ತುಂಬಾ ನೊಂದಿದ್ದಾರೆ' ಎಂದು ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಬಾಲಕ ಯತಿನ್, 'ನಾವು ಟ್ರಿಪ್ಗೆ ಬಂದಿದ್ದೇವೆ. ಅಪ್ಪ-ಅಮ್ಮ ಬಸ್ನಲ್ಲಿದ್ದಾರೆ. ಬಸ್ನಲ್ಲಿ ಮಾತನಾಡಲು ಆಗುವುದಿಲ್ಲ' ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ, ಟ್ರಿಪ್ ಮುಗಿಸಿ ವಾಪಸ್ ಬರಲು ಮೂರು ತಿಂಗಳು ಬೇಕಾಗುತ್ತದೆ. ಬಸ್ ಹತ್ತಲು ಕರೆಯುತ್ತಿದ್ದಾರೆ, ನಾನು ಹೋಗಬೇಕು ಎಂದು ಹೇಳಿರುವುದು ಆಡಿಯೋದಲ್ಲಿ ಕೇಳಿಬಂದಿದೆ.
ಪುನೀತ್ ಕೂಡ ನಮ್ಮ ಜೊತೆಯಲ್ಲಿದ್ದಾನೆ ಎಂದಿದ್ದ ಬಾಲಕ!
ಇದೇ ಸಂಭಾಷಣೆಯಲ್ಲಿ ಸಂಬಂಧಿಕರು ಕೊಲೆಯಾದ ಮತ್ತೊಬ್ಬ ಬಾಲಕ ಪುನೀತ್ ಬಗ್ಗೆಯೂ ವಿಚಾರಿಸಿದ್ದಾರೆ. ಅದಕ್ಕೆ ಯತಿನ್, ಪುನೀತ್ ಕೂಡ ತಮ್ಮ ಜೊತೆಯಲ್ಲಿದ್ದಾನೆ, ಎಲ್ಲರೂ ಬಸ್ನಲ್ಲಿದ್ದಾರೆ ಎಂದು ಉತ್ತರಿಸಿದ್ದಾನೆ ಎನ್ನಲಾಗಿದೆ.
ಒಂದೆಡೆ ಕುಟುಂಬದ ಸದಸ್ಯರು ಸಂಪರ್ಕಕ್ಕೆ ಸಿಗದೆ ಸಂಬಂಧಿಕರು ಆತಂಕಗೊಂಡಿದ್ದರೆ, ಮತ್ತೊಂದೆಡೆ ಎಲ್ಲರೂ ಪ್ರವಾಸಕ್ಕೆ ತೆರಳಿದ್ದಾರೆ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿರುವುದು ಈ ಆಡಿಯೋದಿಂದ ತಿಳಿದುಬರುತ್ತಿದೆ. ಕುಟುಂಬದವರ ಹತ್ಯೆಯ ವಿಚಾರ ಹೊರಬರದಂತೆ ಮಾಡಲು ಆರೋಪಿ ಬಾಲಕನನ್ನು ಬಳಸಿಕೊಂಡಿದ್ದನೇ ಎಂಬ ಗಂಭೀರ ಪ್ರಶ್ನೆಯೂ ಇದೀಗ ಮೂಡಿದೆ.
ಪೊಲೀಸರ ಕೈ ಸೇರಿದ ಆಡಿಯೋ – ತನಿಖೆಯಲ್ಲಿ ಮಹತ್ವದ ತಿರುವು?
ಈ ಆಡಿಯೋ ಸಂಭಾಷಣೆಗಳನ್ನು ಸಂಬಂಧಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಆಡಿಯೋಗಳ ನೈಜತೆ, ಸಂಭಾಷಣೆ ನಡೆದ ಸಮಯ ಹಾಗೂ ಅದರ ಹಿಂದಿನ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.
ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಬಾಲಕನ ಮೂಲಕ ಸಂಬಂಧಿಕರಿಗೆ ನೀಡಲಾಗಿದ್ದ ಮಾಹಿತಿ ಪ್ರಕರಣದ ತನಿಖೆಗೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಈ ಹತ್ಯೆಗಳ ಹಿಂದಿನ ಉದ್ದೇಶವೇನು? ಆರೋಪಿಯ ಸಂಚಿನಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಆಡಿಯೋಗಳಿಂದ ಮತ್ತಷ್ಟು ಸತ್ಯಾಂಶಗಳು ಹೊರಬರಲಿವೆಯೇ? ಎಂಬ ಪ್ರಶ್ನೆಗಳಿಗೆ ಪೊಲೀಸರ ತನಿಖೆಯ ಬಳಿಕ ಉತ್ತರ ಸಿಗಬೇಕಿದೆ.
ಸಂಬಂಧಗಳನ್ನೇ ನಂಬಿಕೆಯ ಸಾಧನವಾಗಿ ಬಳಸಿಕೊಂಡ ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕಿದೆ.
ವರದಿ: ನವೀನ್ ಕುಮಾರ್
---
🌐 ಇನ್ನಷ್ಟು ತಾಜಾ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
🔗 www.karunaadutimes.com
📲 ಕರ್ನಾಟಕದ ಕ್ಷಣಕ್ಷಣದ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ ವೀಕ್ಷಿಸಿ ಮತ್ತು ಸುದ್ದಿಗಳನ್ನು ಹಂಚಿಕೊಳ್ಳಿ.