ಹಾಸನ: ನಾಡಿನ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಇಂದು ತೆರೆ ಬೀಳುತ್ತಿದೆ. ಉತ್ಸವದ ಕೊನೆಯ ದಿನ ನಡೆದ ಸಿದ್ದೇಶ್ವರಸ್ವಾಮಿ ಕೆಂಡೋತ್ಸವದಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಕೆಂಡ ಹಾಯುವ ವೇಳೆ ಆಯತಪ್ಪಿ ಜಾರಿದ ಘಟನೆ ನಡೆದಿದೆ. ಅದೃಷ್ಟವಶಾತ್, ತಕ್ಷಣವೇ ಕಾರ್ಯಪ್ರವೃತ್ತರಾದ ಅವರ ಗನ್ಮನ್ ರಂಜನ್ ಸಂಸದರನ್ನು ಹಿಡಿದು ಮೇಲಕ್ಕೆತ್ತಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕೆಂಡೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ವಿಶೇಷವೆಂದರೆ, ಹಾಸನ ಡಿವೈಎಸ್ಪಿ ಗಂಗಾಧರಪ್ಪ ಹಾಗೂ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕೂಡ ಕೆಂಡ ಹಾಯುವ ಮೂಲಕ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾದರು.
ಕೆಂಡೋತ್ಸವದಲ್ಲಿ ಕೆಲಕಾಲ ಆತಂಕದ ವಾತಾವರಣ!
ಕೆಂಡೋತ್ಸವದ ಸಂದರ್ಭದಲ್ಲಿ ಕೆಲ ಅಚಾತುರ್ಯದ ಘಟನೆಗಳೂ ನಡೆದಿವೆ. ದೇವರ ಉತ್ಸವಮೂರ್ತಿಯನ್ನು ಹೊತ್ತು ಭಕ್ತರು ಕೆಂಡ ಹಾಯುತ್ತಿದ್ದ ವೇಳೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಕೆಂಡದೊಳಗೆ ಬಿದ್ದಿದೆ. ತಕ್ಷಣವೇ ಮತ್ತೊಬ್ಬ ಭಕ್ತ ಕೆಂಡದೊಳಗೆ ಇಳಿದು ಮೊಬೈಲ್ ಅನ್ನು ಹೊರತೆಗೆದಿದ್ದಾರೆ.
ಇನ್ನೊಂದೆಡೆ, ಕೆಂಡದ ಮೇಲೆ ಓಡುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ನೇರವಾಗಿ ಕೆಂಡದೊಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಹೊರಕ್ಕೆ ಎಳೆದು ರಕ್ಷಿಸಿದ್ದಾರೆ. ಕೆಂಡ ಹಾಯ್ದು ಬಂದ ಮಹಿಳೆಯೊಬ್ಬರು ಸುಸ್ತಾಗಿ ಕೆಂಡದ ಕೊಂಡದ ಸಮೀಪವೇ ಕುಸಿದು ಬಿದ್ದಿದ್ದು, ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ಉಪಚರಿಸಿದ್ದಾರೆ.
30 ಲಕ್ಷಕ್ಕೂ ಅಧಿಕ ಭಕ್ತರಿಂದ ದೇವಿಯ ದರ್ಶನ!
ಇನ್ನು ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ ಭಕ್ತರ ಸಂಖ್ಯೆಯಲ್ಲೂ, ಆದಾಯದಲ್ಲೂ ಹೊಸ ದಾಖಲೆ ನಿರ್ಮಿಸಿದೆ. ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗಿನವರೆಗೆ ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ.
1,000 ರೂ. ಮತ್ತು 300 ರೂ. ವಿಶೇಷ ದರ್ಶನ ಟಿಕೆಟ್ಗಳ ಮಾರಾಟ ಹಾಗೂ ಲಾಡು ಪ್ರಸಾದದ ಮಾರಾಟದಿಂದ ದೇವಸ್ಥಾನಕ್ಕೆ ಒಟ್ಟು 25 ಕೋಟಿ 36 ಲಕ್ಷ ರೂಪಾಯಿಗೂ ಅಧಿಕ ಆದಾಯ ಬಂದಿದೆ ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ ಗರ್ಭಗುಡಿ ಬಾಗಿಲು ಮುಚ್ಚುವಿಕೆ
ಇಂದು ಮುಂಜಾನೆ 6 ಗಂಟೆಯವರೆಗೆ ಭಕ್ತರಿಗೆ ನಿರಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಮಧ್ಯಾಹ್ನ 12 ಗಂಟೆಯ ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಇದರೊಂದಿಗೆ ಈ ವರ್ಷದ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ತೆರೆ ಬೀಳಲಿದೆ.
ಭಕ್ತರ ಸಾಗರ, ವಿಶೇಷ ಪೂಜೆ, ಧಾರ್ಮಿಕ ಆಚರಣೆ ಹಾಗೂ ದಾಖಲೆ ಪ್ರಮಾಣದ ಆದಾಯದೊಂದಿಗೆ ಈ ಬಾರಿಯ ಹಾಸನಾಂಬ ಉತ್ಸವ ಹೊಸ ಇತಿಹಾಸ ದಾಖಲಿಸಿದೆ.
ವರದಿ: ನವೀನ್ ಕುಮಾರ್
www.karunaadutimes.com
Tags:#ಹಾಸನಾಂಬ #ಹಾಸನಾಂಬದೇವಿ #ಹಾಸನ #ಶ್ರೇಯಸ್ಪಟೇಲ್ #ಕೆಂಡೋತ್ಸವ #ಸಿದ್ದೇಶ್ವರಸ್ವಾಮಿ #Hassanamba #HassanambaJatre #ShreyasPatel #HassanNews #KarnatakaNews #KannadaNews #KarunaaduTimes #BreakingNews #ಕರ್ನಾಟಕಸುದ್ದಿ