ಚಾಮರಾಜನಗರ: ವರನಟ ಡಾ. ರಾಜ್ಕುಮಾರ್ ಅವರ ದೂರದ ಸಂಬಂಧಿಗೆ ಸೇರಿದ ಮನೆಯ ಮುಂದೆ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣ ತಮಿಳುನಾಡಿನ ಗಾಜನೂರಿನಲ್ಲಿ ಆತಂಕ ಮೂಡಿಸಿದೆ. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಯುವಕರನ್ನು ತಾಳವಾಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ ಮಂಗಳಮ್ಮ ಎಂಬುವವರ ಮನೆಯ ಮುಂದೆ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 10.30ರ ವೇಳೆಗೆ ಏಕಾಏಕಿ ಭಾರೀ ಸ್ಫೋಟದ ಶಬ್ದ ಕೇಳಿಬಂದಿದೆ. ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದ ಕುಟುಂಬಸ್ಥರು ಹೊರಬಂದು ನೋಡುವಷ್ಟರಲ್ಲಿ ಮನೆಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿತ್ತು. ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಸಂಪೂರ್ಣವಾಗಿ ಒಡೆದುಹೋಗಿದ್ದವು.
ಘಟನೆ ನಡೆದ ಬಳಿಕ ಮನೆಯಿಂದ ಹೊರಬಂದು ನೋಡಿದಾಗ ಐವರು ಯುವಕರು ಸ್ಥಳದಲ್ಲೇ ಇದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಐವರು ಯುವಕರನ್ನು ವಶಕ್ಕೆ ಪಡೆದಿರುವ ತಾಳವಾಡಿ ಪೊಲೀಸರು, ಸ್ಫೋಟಕ್ಕೆ ನಿಖರ ಕಾರಣವೇನು? ಇದರ ಹಿಂದೆ ಯಾರಾದರೂ ಉದ್ದೇಶಪೂರ್ವಕ ಕೃತ್ಯ ಎಸಗಿದ್ದಾರೆಯೇ? ಎಂಬ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಈ ನಿಗೂಢ ಸ್ಫೋಟ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸ್ ತನಿಖೆಯಿಂದ ಸ್ಫೋಟದ ಹಿಂದಿನ ಸತ್ಯಾಂಶ ಹೊರಬರಬೇಕಿದೆ.
ವರದಿ: ನವೀನ್ ಕುಮಾರ್
---
ಹೆಚ್ಚಿನ ಸುದ್ದಿಗಳಿಗಾಗಿ ಭೇಟಿ ನೀಡಿ:
🌐 www.karunaadutimes.com
ಕರ್ನಾಟಕದ ಕ್ಷಣಕ್ಷಣದ ಸುದ್ದಿಗಳು, ಜನರ ಧ್ವನಿ ಮತ್ತು ನಾಡಿನ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.
Tags:#GajanurBlast #DrRajkumar #GajanurNews #TalavadyPolice #Chamarajanagar #BreakingNewsKannada #CrimeNews #KannadaNews #KarunaaduTimes #ಕರ್ನಾಟಕಸುದ್ದಿ #ಗಾಜನೂರು