ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ ಏರಿಕೆಯಾಗಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ಹಬ್ಬದ ಸಂದರ್ಭದಲ್ಲಿ ಸಿಡಿಸಲಾದ ಪಟಾಕಿಗಳ ಹೊಗೆ ವಾತಾವರಣದ ಮೇಲೆ ಪರಿಣಾಮ ಬೀರಿದ್ದು, ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) 186ಕ್ಕೆ ತಲುಪಿದೆ.
ಹಬ್ಬದ ದಿನ ಪಟಾಕಿಗಳ ಅಬ್ಬರ ಹೆಚ್ಚಾದಂತೆ ನಗರದ ವಾಯು ಗುಣಮಟ್ಟದಲ್ಲಿಯೂ ಗಣನೀಯ ಬದಲಾವಣೆ ಕಂಡುಬಂದಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೀಡಿರುವ ಅಂಕಿಅಂಶಗಳ ಪ್ರಕಾರ, ಭಾನುವಾರ ರಾತ್ರಿ 8 ಗಂಟೆ ವೇಳೆಗೆ ಬೆಂಗಳೂರಿನ AQI ಪ್ರಮಾಣ 74ರಷ್ಟಿತ್ತು. ಬಳಿಕ ಪಟಾಕಿಗಳ ಸಿಡಿತ ಹೆಚ್ಚಾದಂತೆ ಮಾಲಿನ್ಯದ ಮಟ್ಟವೂ ಹಂತ ಹಂತವಾಗಿ ಏರಿಕೆಯಾಗಿದೆ.
ರಾತ್ರಿ 10 ಗಂಟೆಗೆ AQI 85ಕ್ಕೆ ತಲುಪಿದರೆ, 11 ಗಂಟೆ ವೇಳೆಗೆ 93ಕ್ಕೆ ಏರಿಕೆಯಾಗಿದೆ. ಮಧ್ಯರಾತ್ರಿ 12 ಗಂಟೆಯ ನಂತರ ಈ ಪ್ರಮಾಣ 102ಕ್ಕೆ ತಲುಪಿತ್ತು. ಇದೀಗ ವಾಯು ಗುಣಮಟ್ಟ ಸೂಚ್ಯಂಕ 186ಕ್ಕೆ ಏರಿಕೆಯಾಗಿರುವುದು ಪರಿಸರದ ಮೇಲಿನ ಪರಿಣಾಮವನ್ನು ಎತ್ತಿ ತೋರಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಯುಮಾಲಿನ್ಯದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ದೀಪಾವಳಿ ಸಂಭ್ರಮದ ನಡುವೆ ಪಟಾಕಿಗಳಿಂದ ಹೊರಬರುವ ಹೊಗೆ ಮತ್ತು ಸೂಕ್ಷ್ಮ ಧೂಳಿನ ಕಣಗಳು ನಗರದ ವಾತಾವರಣವನ್ನು ಕಲುಷಿತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ವಾಯುಮಾಲಿನ್ಯ ಹೆಚ್ಚಳದಿಂದ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಅನಗತ್ಯವಾಗಿ ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುವುದು ಹಾಗೂ ಪರಿಸರ ಸ್ನೇಹಿ ಹಬ್ಬದ ಆಚರಣೆಗೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ.
ಹಬ್ಬದ ಸಂಭ್ರಮ ಪರಿಸರದ ಆರೋಗ್ಯಕ್ಕೆ ಧಕ್ಕೆ ತರದಿರಲಿ ಎಂಬ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ.
ವರದಿ: ನವೀನ್ ಕುಮಾರ್
ಕರ್ನಾಟಕದ ಸುದ್ದಿಗಳಿಗಾಗಿ ಸಂಪರ್ಕದಲ್ಲಿರಿ – www.karunaadutimes.com