ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವದ ನಿರ್ವಹಣೆಯಲ್ಲಿ ಹಣಕಾಸಿನ ಅಕ್ರಮ ನಡೆದಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಸಚಿವ ಕೆ.ಎಂ. ಶಿವಲಿಂಗೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಸನಾಂಬೆ ದೇವಿಯ ಪಾದದ ಮೇಲೆ ಆಣೆ ಮಾಡಿ ಹೇಳುತ್ತೇನೆ, ಜಾತ್ರಾ ಮಹೋತ್ಸವದ ಖರ್ಚು-ವೆಚ್ಚದಲ್ಲಿ ಒಂದೇ ಒಂದು ಪೈಸೆಯನ್ನೂ ಲೋಪ ಮಾಡಿಲ್ಲ. ಮುಂದೆ ಕೂಡ ಯಾವುದೇ ಅಕ್ರಮ ನಡೆಯಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವದ ವಿಚಾರದಲ್ಲಿ ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರವೃತ್ತಿಯನ್ನು ಇನ್ನಾದರೂ ಬಿಡಬೇಕು. ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯನ್ನಾಗಿ ಮಾಡಬಾರದು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
20 ದಿನಗಳಿಂದ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ!
ಕಳೆದ 20 ದಿನಗಳಿಂದ ಸ್ವಂತ ಮನೆಗೂ ತೆರಳಿ ವಿಶ್ರಾಂತಿ ಪಡೆಯಲು ಸಾಧ್ಯವಾಗಿಲ್ಲ. ಹಾಸನದಲ್ಲೇ ಉಳಿದು ಹಗಲು-ರಾತ್ರಿ ಎನ್ನದೆ ಜಾತ್ರಾ ಮಹೋತ್ಸವದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮುಖ್ಯಮಂತ್ರಿಗಳು ನನಗೆ ಮಹತ್ವದ ಜವಾಬ್ದಾರಿ ವಹಿಸಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಉದ್ದೇಶದಿಂದ ಸಂಸದರು ಹಾಗೂ ಅಧಿಕಾರಿಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕವೂ ಈ ರೀತಿಯ ಆರೋಪಗಳನ್ನು ಮಾಡಿರುವುದು ನೋವು ತಂದಿದೆ. ದೇವಿಯ ಪಾದದ ಮೇಲೆ ಆಣೆ ಮಾಡಿ ಹೇಳಲು ನಾನು ಸಿದ್ಧನಿದ್ದೇನೆ. ಭ್ರಷ್ಟಾಚಾರದ ಆರೋಪಗಳನ್ನು ಮಾಡುವುದು ಸುಲಭ. ಆದರೆ, ಧಾರ್ಮಿಕ ಕಾರ್ಯಕ್ರಮಗಳ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದಾಖಲೆಗಳೊಂದಿಗೆ ಸ್ಪಷ್ಟನೆ ನೀಡುವ ಸುಳಿವು!
ಜಾತ್ರಾ ಮಹೋತ್ಸವದ ನಿರ್ವಹಣೆಯಲ್ಲಿ ಯಾವುದೇ ಹಣಕಾಸಿನ ಲೋಪವಾಗಿಲ್ಲ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಗಳ ಮೂಲಕ ಉತ್ತರ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವುದಾಗಿಯೂ ಹೇಳಿದ್ದಾರೆ.
ಒಟ್ಟಿನಲ್ಲಿ, ಹಾಸನಾಂಬೆ ಜಾತ್ರಾ ಮಹೋತ್ಸವದ ಹಣಕಾಸಿನ ನಿರ್ವಹಣೆ ವಿಚಾರವಾಗಿ ಕುಮಾರಸ್ವಾಮಿ ಅವರ ಆರೋಪ ಮತ್ತು ಸಚಿವ ಶಿವಲಿಂಗೇಗೌಡ ಅವರ ತಿರುಗೇಟು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವರದಿ: ನವೀನ್ ಕುಮಾರ್
ಕರುನಾಡು ಟೈಮ್ಸ್ | www.karunaadutimes.com
Tags:#ಹಾಸನಾಂಬೆ #ಹಾಸನ #ಶಿವಲಿಂಗೇಗೌಡ #HDKumaraswamy #HassanNews #HasanambaJatre #KarnatakaPolitics #KarunaaduTimes #KannadaNews