ಚಿಕ್ಕಮಗಳೂರು: ಪಾಕಿಸ್ತಾನ ಮೂಲದ ವಿವಾದಿತ ಧರ್ಮಗುರು ರಿಯಾಜ್ ಅಹ್ಮದ್ ಗೋಹರ್ ಶಾಹಿ ಅವರ ಅನುಯಾಯಿಯ ಸಮಾಧಿ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಇಂದಾವರದ ಖಬರಸ್ಥಾನದಲ್ಲಿರುವ ರಿಜ್ವಾನ್ ಅವರ ಸಮಾಧಿಗೆ ಹಸಿರು ಚಾದರ ಹೊದಿಸಿ, ಅದರ ಮೇಲಿನ ಧಾರ್ಮಿಕ ಬರಹವನ್ನು ಬದಲಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬೆಳವಣಿಗೆ ಸ್ಥಳೀಯ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ಪರಿಸ್ಥಿತಿ ಸೂಕ್ಷ್ಮ ಸ್ವರೂಪ ಪಡೆದುಕೊಂಡಿದೆ.
ಏನಿದು ವಿವಾದ?
ಕಳೆದ ವರ್ಷ ಮೃತಪಟ್ಟಿದ್ದ ರಿಜ್ವಾನ್ ಅವರನ್ನು ಇಂದಾವರದ ಖಬರಸ್ಥಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರ ಧಾರ್ಮಿಕ ನಂಬಿಕೆ ಹಾಗೂ ಗೋಹರ್ ಶಾಹಿ ಅವರೊಂದಿಗಿನ ಅನುಯಾಯಿ ಸಂಬಂಧದ ವಿಚಾರವಾಗಿ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ. ಆದರೂ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದರು.
ಇದೀಗ ಒಂದು ವರ್ಷದ ಬಳಿಕ ರಿಜ್ವಾನ್ ಅವರ ಕುಟುಂಬಸ್ಥರು ಸಮಾಧಿಗೆ ಹಸಿರು ಚಾದರ ಹೊದಿಸಿ, ಗೋರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ವೇಳೆ ಸಮಾಧಿಯ ಮೇಲಿದ್ದ ಕಲ್ಮದ ಬರಹವನ್ನು ತಿದ್ದಿ, ಕಲ್ಮಕ್ಕೆ ವಿರುದ್ಧವಾದ ಸಾಲುಗಳನ್ನು ಬರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರ ಈಗ ವಿವಾದಕ್ಕೆ ಪ್ರಮುಖ ಕಾರಣವಾಗಿದೆ.
ಕುಟುಂಬಸ್ಥರು ಮತ್ತು ಸಮುದಾಯದ ಮುಖಂಡರ ನಡುವೆ ವಾಕ್ಸಮರ
ಗೋಹರ್ ಶಾಹಿ ಅವರ ಸಿದ್ಧಾಂತ ಹಾಗೂ ಅನುಯಾಯಿಗಳ ಕುರಿತು ಮುಸ್ಲಿಂ ಸಮುದಾಯದ ಕೆಲವು ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಾಧಿಯ ಮೇಲಿನ ಧಾರ್ಮಿಕ ಬರಹವನ್ನು ಬದಲಾಯಿಸಿರುವುದು ಮತ್ತು ಹಸಿರು ಚಾದರ ಹೊದಿಸಿರುವುದನ್ನು ಆಕ್ಷೇಪಿಸಿರುವ ಮುಖಂಡರು, ವಿವಾದಾತ್ಮಕ ಬರಹ ಹಾಗೂ ಚಾದರವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂಬಂಧ ರಿಜ್ವಾನ್ ಅವರ ಸಹೋದರ ಬರ್ಕತ್ ಮತ್ತು ಮುಸ್ಲಿಂ ಸಮುದಾಯದ ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಎಸ್ಪಿಗೆ ದೂರು – ಮುಂದೇನು?
ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ಸಮುದಾಯದ ಮುಖಂಡರು, ಸಮಾಧಿಯ ಮೇಲಿನ ಆಕ್ಷೇಪಾರ್ಹ ಬರಹ ಹಾಗೂ ಚಾದರವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಾಯ್ಮಾ ಅವರಿಗೆ ದೂರು ಸಲ್ಲಿಸಿದ್ದಾರೆ.
ಒಂದು ಸಮಾಧಿಯ ವಿಚಾರವಾಗಿ ಆರಂಭವಾದ ವಿವಾದ ಇದೀಗ ಧಾರ್ಮಿಕ ಭಾವನೆಗಳು ಮತ್ತು ಸಮುದಾಯದ ಸಂಘರ್ಷದ ರೂಪ ಪಡೆದುಕೊಳ್ಳುವ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ವರದಿ: ನವೀನ್ ಕುಮಾರ್
ಕರುನಾಡು ಟೈಮ್ಸ್