ಮಂಡ್ಯ: ಇಬ್ಬರು ಪುಟ್ಟ ಮಕ್ಕಳ ತಾಯಿಯಾಗಿದ್ದ ವಿವಾಹಿತೆ ಹಾಗೂ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಹೊರವಲಯದ ವಿಸಿ ಫಾರಂ ರೈಲ್ವೆ ಗೇಟ್ ಸಮೀಪ ನಡೆದಿದೆ. ಮೃತರನ್ನು ಸಹನಾ (25) ಹಾಗೂ ರಾಹುಲ್ (23) ಎಂದು ಗುರುತಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಮೃತರ ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದಾರೆ.
ಎಂಟು ವರ್ಷಗಳ ದಾಂಪತ್ಯ, ಇಬ್ಬರು ಮಕ್ಕಳು – ಬೇರೊಂದು ಸಂಬಂಧದಿಂದ ಬಿರುಕು?
ಸಹನಾ ಸುಮಾರು ಎಂಟು ವರ್ಷಗಳ ಹಿಂದೆ ವೀರೇಶ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಹೆಣ್ಣು ಮಗು ಹಾಗೂ ಎರಡು ವರ್ಷದ ಗಂಡು ಮಗು ಇದ್ದಾರೆ. ವೀರೇಶ್ ಆಟೋ ಚಾಲಕರಾಗಿದ್ದು, ಕುಟುಂಬ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ವಾಸವಾಗಿತ್ತು ಎನ್ನಲಾಗಿದೆ.
ಇದೇ ಕಟ್ಟಡದಲ್ಲಿ ವಾಸವಿದ್ದ ರಾಹುಲ್ ಹಾಗೂ ಸಹನಾ ನಡುವೆ ಪರಿಚಯ ಬೆಳೆದು ಆತ್ಮೀಯತೆಗೆ ತಿರುಗಿತ್ತು ಎನ್ನಲಾಗಿದೆ. ಇವರಿಬ್ಬರ ನಡುವಿನ ಸಂಬಂಧದ ವಿಚಾರ ಪತಿ ವೀರೇಶ್ಗೆ ತಿಳಿದ ಬಳಿಕ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ವೀರೇಶ್ ಮನೆ ಬದಲಾಯಿಸಿದ್ದರು. ಹಿರಿಯರ ಸಮ್ಮುಖದಲ್ಲಿಯೂ ಹಲವು ಬಾರಿ ರಾಜಿ ಪಂಚಾಯಿತಿ ನಡೆದಿತ್ತು. ರಾಹುಲ್ನಿಂದ ದೂರವಿರುವಂತೆ ಸಹನಾಗೆ ಸಲಹೆ ನೀಡಲಾಗಿತ್ತು ಎನ್ನಲಾಗಿದೆ.
⚡ ಸೋಮವಾರದ ಜಗಳದ ಬಳಿಕ ನಡೆದಿದ್ದೇನು?
ಕಳೆದ ಸೋಮವಾರವೂ ಇದೇ ವಿಚಾರವಾಗಿ ಸಹನಾ ಹಾಗೂ ವೀರೇಶ್ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ತಾನು ರಾಹುಲ್ ಜೊತೆಯೇ ಜೀವನ ನಡೆಸುವುದಾಗಿ ಸಹನಾ ಹೇಳಿದ್ದರೆ, ಇಬ್ಬರಿಗೂ ಒಟ್ಟಿಗೆ ಬದುಕಲು ಬಿಡುವುದಿಲ್ಲ ಎಂದು ವೀರೇಶ್ ಬೆದರಿಕೆ ಹಾಕಿದ್ದರೆಂಬ ಆರೋಪ ಕೇಳಿಬಂದಿದೆ.
ಇದಾದ ಬಳಿಕ ಸಹನಾ ಪತಿಯ ಮನೆಯಿಂದ ಹೊರಟು ಮಂಡ್ಯ ಸಮೀಪದ ಗುನ್ನಾಯಕನಹಳ್ಳಿಯಲ್ಲಿರುವ ಅಜ್ಜಿಯ ಮನೆಗೆ ತೆರಳಿದ್ದರು. ಗುರುವಾರ ಅಲ್ಲಿಗೆ ಬಂದಿದ್ದ ರಾಹುಲ್ ಸಹನಾಳನ್ನು ಭೇಟಿಯಾಗಿದ್ದ. ಬಳಿಕ ಇಬ್ಬರೂ ವೀರೇಶ್ ವಿರುದ್ಧ ದೂರು ನೀಡುವ ಕುರಿತು ಚಿಂತನೆ ನಡೆಸಿದ್ದರು ಎನ್ನಲಾಗಿದೆ.
ಈ ನಡುವೆ ತಮ್ಮ ಸಂಬಂಧಕ್ಕೆ ಎದುರಾಗಿದ್ದ ವಿರೋಧ ಹಾಗೂ ಕೌಟುಂಬಿಕ ಸಂಘರ್ಷದಿಂದ ಮನನೊಂದು ಇಬ್ಬರೂ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿರಬಹುದು ಎಂಬ ಮಾಹಿತಿ ಪ್ರಾಥಮಿಕವಾಗಿ ತಿಳಿದುಬಂದಿದೆ. ಶುಕ್ರವಾರ ಬೆಳಗ್ಗೆ ಮಂಡ್ಯದ ವಿಸಿ ಫಾರಂ ರೈಲ್ವೆ ಗೇಟ್ ಸಮೀಪ ರೈಲಿಗೆ ಸಿಲುಕಿ ಇಬ್ಬರೂ ಮೃತಪಟ್ಟಿದ್ದಾರೆ.
🕯️ ಇಬ್ಬರು ಪುಟ್ಟ ಮಕ್ಕಳ ಭವಿಷ್ಯಕ್ಕೆ ಎದುರಾದ ಪ್ರಶ್ನೆ!
ಒಂದು ಕುಟುಂಬದಲ್ಲಿ ಉಂಟಾದ ಸಂಘರ್ಷ ದುರಂತ ಅಂತ್ಯ ಕಂಡಿದ್ದು, ಇಬ್ಬರು ಪುಟ್ಟ ಮಕ್ಕಳು ತಾಯಿಯನ್ನು ಕಳೆದುಕೊಂಡಿದ್ದಾರೆ. ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸದ್ಯ ರೈಲ್ವೆ ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದು, ಸಾವಿನ ಹಿಂದಿನ ನಿಖರ ಕಾರಣ ಹಾಗೂ ಇತರ ಆಯಾಮಗಳು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ವರದಿ: ನವೀನ್ ಕುಮಾರ್
Hashtags: #MandyaNews #MandyaCrime #MandyaBreakingNews #KarnatakaNews #ಮಂಡ್ಯಸುದ್ದಿ #ಕರ್ನಾಟಕಸುದ್ದಿ #KarunaaduTimes
🌐 ಇನ್ನಷ್ಟು ಸುದ್ದಿಗಳಿಗಾಗಿ ಭೇಟಿ ನೀಡಿ: www.karunaadutimes.com