ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಹತ್ಯೆಯ ಬಳಿಕ ಮೃತದೇಹಗಳನ್ನು ಸಾಗಿಸುವಾಗ ರಕ್ತ ಸೋರದಂತೆ ಹಾಗೂ ಸಾರ್ವಜನಿಕರಿಗೆ ಅನುಮಾನ ಬಾರದಂತೆ ಆರೋಪಿ ಇಂದುಶೇಖರ್ ಪೂರ್ವಯೋಜನೆ ಮಾಡಿಕೊಂಡಿದ್ದ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ನಂದಿಬೆಟ್ಟದಲ್ಲಿ ಬಾಲಕ ಪುನೀತ್ನ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆ ವೇಳೆ ಈ ಅಂಶಗಳು ಬೆಳಕಿಗೆ ಬಂದಿವೆ. ಮೃತದೇಹವನ್ನು ಮೊದಲು ಬೆಡ್ಶೀಟ್ನಲ್ಲಿ ಸುತ್ತಿ, ಬಳಿಕ ಒಂಬತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಮೃತದೇಹ ಸಾಗಿಸುವ ಸಂದರ್ಭದಲ್ಲಿ ಕಾರಿನೊಳಗೆ ರಕ್ತ ಸೋರದಂತೆ ಮುನ್ನೆಚ್ಚರಿಕೆ ವಹಿಸಿದ್ದ ಆರೋಪಿ, ಯಾರಾದರೂ ಪ್ರಶ್ನಿಸಿದರೆ ಬಟ್ಟೆಗಳ ಮೂಟೆ ಎಂದು ಹೇಳಲು ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ಕೃತ್ಯಕ್ಕೂ ಮುನ್ನವೇ ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿದ್ದ ಎಂಬ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಹೊರಬಂದಿದೆ.
ಈ ಪ್ರಕರಣದಲ್ಲಿ ಹತ್ಯೆಯ ನಂತರದ ಪ್ರತಿಯೊಂದು ಚಲನವಲನಕ್ಕೂ ಆರೋಪಿ ಯೋಜನೆ ರೂಪಿಸಿದ್ದನೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ, ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಒಂದೊಂದೇ ಆಘಾತಕಾರಿ ಸಂಗತಿಗಳು ಹೊರಬರುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadutimes.com