ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿದೆ. ನವೆಂಬರ್ 7ರಿಂದ ಈ ಆದೇಶ ಜಾರಿಗೆ ಬರಲಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಾಡಿದ್ದ ಶಿಫಾರಸಿಗೆ ಪ್ರಾಧಿಕಾರ ಸಮ್ಮತಿ ಸೂಚಿಸಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಮ್ಮ ರಾಜ್ಯಗಳ ನೀರಿನ ಲಭ್ಯತೆ ಹಾಗೂ ಕೃಷಿ ಅಗತ್ಯಗಳ ಕುರಿತು ವಾದ ಮಂಡಿಸಿದ್ದವು. ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶದ 56 ತಾಲೂಕುಗಳ ಪೈಕಿ 55 ತಾಲೂಕುಗಳು ಬರಪೀಡಿತವಾಗಿವೆ. ರಾಜ್ಯದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಿಗೆ ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ.53.88ರಷ್ಟು ಒಳಹರಿವು ಕೊರತೆಯಾಗಿದೆ ಎಂದು ಕರ್ನಾಟಕ ಸಭೆಯಲ್ಲಿ ತಿಳಿಸಿತ್ತು.
ಜುಲೈ 29ರಿಂದ ನವೆಂಬರ್ 6ರವರೆಗೆ ಬಿಳಿಗುಂಡ್ಲು ಮೂಲಕ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಸುಮಾರು 2.28 ಟಿಎಂಸಿ ನೀರು ಹರಿದಿದೆ ಎಂದೂ ರಾಜ್ಯದ ಪರವಾಗಿ ವಾದಿಸಲಾಗಿತ್ತು. ತಮಿಳುನಾಡಿನಲ್ಲಿ ಈಶಾನ್ಯ ಮುಂಗಾರು ಮಳೆ ವಾಡಿಕೆಗಿಂತ ಶೇ.23ರಷ್ಟು ಹೆಚ್ಚಾಗಿದೆ. ಅಲ್ಲಿನ ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ ನವೆಂಬರ್ 5ರಂದು ಒಟ್ಟು 37.125 ಟಿಎಂಸಿ ನೀರು ಸಂಗ್ರಹವಿತ್ತು. ಹೀಗಾಗಿ ಸಾಂಬಾ ಬೆಳೆಗಳಿಗೆ ಡಿಸೆಂಬರ್ 15ರವರೆಗೆ ನೀರಿನ ಅಗತ್ಯ ಪೂರೈಸಲು ಸಾಧ್ಯವಿದೆ ಎಂಬುದು ಕರ್ನಾಟಕದ ಪ್ರತಿಪಾದನೆಯಾಗಿತ್ತು.
ಆದರೆ, ತಮಿಳುನಾಡು ತನ್ನ ಪಾಲಿನ ನೀರಿನಲ್ಲಿ ಕೊರತೆಯಾಗಿದೆ ಎಂದು ವಾದಿಸಿತ್ತು. ನವೆಂಬರ್ 4ರವರೆಗೆ 16.895 ಟಿಎಂಸಿ ನೀರಿನ ಕೊರತೆಯಿದೆ ಎಂದು ತಿಳಿಸಿ, ಸಾಂಬಾ ಬೆಳೆಗಳಿಗೆ ತಕ್ಷಣ ನೀರಾವರಿ ಅಗತ್ಯವಿದೆ ಎಂದು ಮನವಿ ಮಾಡಿತ್ತು.
ಎರಡೂ ರಾಜ್ಯಗಳ ವಾದಗಳನ್ನು ಪರಿಶೀಲಿಸಿದ CWRC, ನವೆಂಬರ್ 7ರ ಬೆಳಿಗ್ಗೆ 8 ಗಂಟೆಯಿಂದ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ತಲುಪುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿತ್ತು. ಇದೀಗ CWMA ಕೂಡ ಅದಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ಮುಂದಿನ 15 ದಿನಗಳಲ್ಲಿ ಒಟ್ಟು 3.88 ಟಿಎಂಸಿ ನೀರು ತಮಿಳುನಾಡಿಗೆ ಹರಿಯಲಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತು ಜಲಾಶಯಗಳ ಒಳಹರಿವಿನ ಕೊರತೆಯ ನಡುವೆಯೇ ಹೊರರಾಜ್ಯಕ್ಕೆ ನೀರು ಹರಿಸುವ ಆದೇಶ ಹೊರಬಿದ್ದಿರುವುದು ಕಾವೇರಿ ಜಲಾನಯನ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸುದ್ದಿಗಳಿಗಾಗಿ ಭೇಟಿ ನೀಡಿ: www.karunaadutimes.com