ಚಿಕ್ಕಮಂಗಳೂರು:ಚಿಕ್ಕಮಗಳೂರಿನಲ್ಲಿ ನಕಲಿ ಜೇನುತುಪ್ಪ ದಂಧೆ ಬಯಲು! ಬೆಲ್ಲದ ಪಾಕ ಚಿಕ್ಕಮಗಳೂರು: ಅಡುಗೆ ಮನೆಯಲ್ಲಿನ ಪ್ರಮುಖ ಆಹಾರ ಪದಾರ್ಥವಾಗಿರುವ ಜೇನುತುಪ್ಪದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಜೇನುಗೂಡಿಗೆ ಬೆಲ್ಲದ ಪಾಕವನ್ನು ಮಿಶ್ರಣ ಮಾಡಿ, ಅದನ್ನೇ ಅಸಲಿ ಜೇನುತುಪ್ಪವೆಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಸ್ಥಳೀಯರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ನಗರದ ವಾಜಪೇಯಿ ಬಡಾವಣೆಯ ನಿರ್ಜನ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕಟ್ಟಡಗಳು ಹಾಗೂ ಸರ್ಕಾರಿ ಕಚೇರಿಗಳ ಆವರಣದಲ್ಲಿ ಜೇನುಗೂಡು ಕಟ್ಟಿರುವುದನ್ನು ಗಮನಿಸುವ ಆರೋಪಿತರು, ಅಲ್ಲಿಂದ ಜೇನುಗೂಡನ್ನು ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿ ಜೇನುಗೂಡನ್ನು ಬೆಲ್ಲದ ಪಾಕದಲ್ಲಿ ನೆನೆಸುವ ಮೂಲಕ ಜೇನುತುಪ್ಪದ ಪ್ರಮಾಣವನ್ನು ಹೆಚ್ಚಿಸಿ, ಅದನ್ನು ಅಸಲಿ ಜೇನುತುಪ್ಪವೆಂದು ಬಿಂಬಿಸಿ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದೇ ರೀತಿಯ ಚಟುವಟಿಕೆ ನಡೆಯುತ್ತಿದ್ದುದನ್ನು ಗಮನಿಸಿದ ಸ್ಥಳೀಯರು, ಮೂವರನ್ನು ಸ್ಥಳದಲ್ಲೇ ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಮ್ಮನ್ನು ಅಸ್ಸಾಂ ಮೂಲದವರು ಎಂದು ಅವರು ಪರಿಚಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಅವರ ಮೂಲದ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳಾಗಿರಬಹುದು ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೈಸರ್ಗಿಕ ಜೇನುತುಪ್ಪವೆಂದು ನಂಬಿ ಖರೀದಿಸುವ ಗ್ರಾಹಕರು ಮೋಸ ಹೋಗದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ಜೇನುತುಪ್ಪದ ಮಾದರಿಯನ್ನು ಪರೀಕ್ಷಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವರದಿ: ನವೀನ್ ಕುಮಾರ್
Hashtags:#Chikkamagaluru #FakeHoney #HoneyAdulteration #KarnatakaNews #FoodAdulteration #ಚಿಕ್ಕಮಗಳೂರು #ನಕಲಿಜೇನುತುಪ್ಪ #ಕರ್ನಾಟಕಸುದ್ದಿ #KarunaaduTimes