ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6ರಿಂದ ಮುಂದಿನ 18 ತಿಂಗಳ ಕಾಲ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಬಳ್ಳಾರಿ ರಸ್ತೆಯ ಯುಎಎಸ್ ಸ್ಟಾಫ್ ಕ್ವಾರ್ಟರ್ಸ್ನಿಂದ ಮೆಖ್ರಿ ಸರ್ಕಲ್ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಗಳು, ಖಾಸಗಿ ಬಸ್ಗಳು ಹಾಗೂ ಎಲ್ಲ ಮಾದರಿಯ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ವಾಹನ ಸವಾರರ ಅನುಕೂಲಕ್ಕಾಗಿ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ಪರ್ಯಾಯ ಮಾರ್ಗಗಳ ವಿವರ:
1. ಹೆಬ್ಬಾಳ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳುವವರು ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಟ್ಯಾನರಿ ರಸ್ತೆ ಹಾಗೂ ನಾಗವಾರ ರಸ್ತೆ ಮೂಲಕ ಸಂಚರಿಸಬೇಕು.
2. ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ತೆರಳುವವರು ಮತ್ತಿಕೆರೆ ರಸ್ತೆ ಮೂಲಕ ಬಂದು ಬಿಇಎಲ್ ವೃತ್ತದಲ್ಲಿ ಬಲಕ್ಕೆ ತಿರುಗಿ ರಿಂಗ್ ರೋಡ್ ಮಾರ್ಗ ಬಳಸಬೇಕು.
3. ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಬರುವವರು ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ ನಾಗವಾರ ಜಂಕ್ಷನ್ ಮೂಲಕ ಬಾಂಬೂ ಬಜಾರ್–ಕ್ವೀನ್ಸ್ ರಸ್ತೆ ಮಾರ್ಗವಾಗಿ ಸಂಚರಿಸಬಹುದು.
4. ಮತ್ತೊಂದು ಪರ್ಯಾಯವಾಗಿ ಹೆಬ್ಬಾಳದಲ್ಲಿ ಬಲಕ್ಕೆ ತಿರುಗಿ ಹೆಬ್ಬಾಳ್ ರಿಂಗ್ ರಸ್ತೆ, ಕುವೆಂಪು ಸರ್ಕಲ್, ಗೊರಗುಂಟೆಪಾಳ್ಯ ಜಂಕ್ಷನ್ ಮೂಲಕ ಡಾ. ರಾಜ್ಕುಮಾರ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.
5. ಯಶವಂತಪುರದಿಂದ ನಗರದ ಕೇಂದ್ರ ಭಾಗಕ್ಕೆ ಬರುವವರು ಬಿಎಚ್ಇಎಲ್ ಜಂಕ್ಷನ್ನಿಂದ ಮಾರಮ್ಮ ಸರ್ಕಲ್ ಬಳಿ ಬಲಕ್ಕೆ ತಿರುಗಿ ಮಾರ್ಗೋಸಾ ರಸ್ತೆ ಮೂಲಕ ಸಂಚರಿಸಬೇಕು.
6. ಹೆಬ್ಬಾಳದಿಂದ ನಗರಕ್ಕೆ ಬರುವ ವಾಹನಗಳು ಫ್ಲೈಓವರ್ನಿಂದ ಇಳಿದ ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ ಮೂಲಕ ಸಿಬಿಐ ಜಂಕ್ಷನ್ ತಲುಪಿ ಬಳ್ಳಾರಿ ಮುಖ್ಯ ರಸ್ತೆಯನ್ನು ಸಂಪರ್ಕಿಸಬಹುದು.
7. ಹೆಬ್ಬಾಳದಿಂದ ಆನಂದನಗರ, ಆರ್.ಟಿ. ನಗರ ಹಾಗೂ ಜಯಮಹಲ್ ಕಡೆಗೆ ತೆರಳುವವರು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ, ಆನಂದನಗರ ಕ್ರಾಸ್ ಹಾಗೂ ಸಿಬಿಐ ಜಂಕ್ಷನ್ ಮೂಲಕ ಆನಂದನಗರ ಮುಖ್ಯ ರಸ್ತೆ ತಲುಪಬೇಕು.
ವಾಹನ ಸವಾರರಿಗೆ ಸೂಚನೆ
ಸಂಚಾರ ಮಾರ್ಗ ಬದಲಾವಣೆಯಿಂದಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಹೆಚ್ಚುವರಿ ಸಮಯವನ್ನು ಮೀಸಲಿಡಬೇಕು. ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಮನವಿ ಮಾಡಲಾಗಿದೆ.
ಮುಂದಿನ 18 ತಿಂಗಳ ಕಾಲ ಬಳ್ಳಾರಿ ರಸ್ತೆ ಭಾಗದಲ್ಲಿ ಸಂಚಾರ ಬದಲಾವಣೆ ಇರಲಿರುವುದರಿಂದ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸುದ್ದಿಗಳಿಗಾಗಿ ಭೇಟಿ ನೀಡಿ:
www.karunaadutimes.com
Tags:#Bengaluru #BangaloreTraffic #AirportRoad #Hebbal #BengaluruAirport #TrafficUpdate #ಬೆಂಗಳೂರು #ಬೆಂಗಳೂರುಸುದ್ದಿ #ಸಂಚಾರಬದಲಾpವಣೆ #ಕರುನಾಡುಟೈಮ್ಸ್ #KarunaaduTimes