ಹಾಸನ: ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿರುವ ಬೆನ್ನಲ್ಲೇ, ಪ್ರೋಟೋಕಾಲ್ ವಿಚಾರವಾಗಿ ಕರ್ತವ್ಯ ನಿರತ ಸಿಬ್ಬಂದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ವಾಗ್ವಾದ ಇದೀಗ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕರ್ತರ ದೂರಿನ ಬೆನ್ನಲ್ಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿದ್ದು, ಕೊನೆಗೆ ಕಾರ್ಯಕರ್ತರ ಬಳಿ ಕ್ಷಮೆಯಾಚಿಸಿದ ಘಟನೆ ನಡೆದಿದೆ.
ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ ಏಳನೇ ದಿನವೂ ದೇವಾಲಯದ ಸುತ್ತಮುತ್ತ ಭಕ್ತರ ದಟ್ಟಣೆ ಕಂಡುಬಂದಿದೆ. ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಶಾಸಕ ಹೆಚ್.ಪಿ. ಸ್ವರೂಪ್ಪ್ರಕಾಶ್, ಶಾಸಕಿ ಭಾಗೀರಥಿ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ಕುಟುಂಬ ಸಮೇತರಾಗಿ ದೇವಿಯ ದರ್ಶನ ಪಡೆದಿದ್ದಾರೆ.
🚨 ಪ್ರೋಟೋಕಾಲ್ ವಿಚಾರಕ್ಕೆ ಸಿಬ್ಬಂದಿ ಜೊತೆ ವಾಗ್ವಾದ!
ಇದೇ ಸಂದರ್ಭದಲ್ಲಿ ರಾಮನಗರ ಹಾಗೂ ಕನಕಪುರ ಭಾಗದಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಕುಟುಂಬದ ಸದಸ್ಯರು ಪ್ರೋಟೋಕಾಲ್ ವ್ಯವಸ್ಥೆಯಡಿ ದೇವಾಲಯಕ್ಕೆ ಆಗಮಿಸಿದ್ದರು. ಪ್ರವಾಸಿ ಮಂದಿರದಿಂದ ವಿಶೇಷ ವಾಹನದಲ್ಲಿ ಬಂದಿದ್ದ ಐದಾರು ಮಂದಿಯನ್ನು ದೇವಾಲಯದ ಮುಖ್ಯದ್ವಾರದ ಗೇಟ್ ಬಳಿ ಗ್ರಾಮ ಲೆಕ್ಕಾಧಿಕಾರಿ ಮನು ಅವರು ಇಳಿಸಿದ್ದಾರೆ ಎನ್ನಲಾಗಿದೆ.
ನಂತರ ದೇವಾಲಯದ ಒಳಭಾಗಕ್ಕೆ ತೆರಳಿ ದರ್ಶನದ ಸಾಲಿನಲ್ಲಿ ಅವರನ್ನು ಸೇರಿಸುವಂತೆ ಮತ್ತೊಬ್ಬ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಆದರೆ, ಗ್ರಾಮ ಲೆಕ್ಕಾಧಿಕಾರಿ ಮನು ಅವರೂ ತಮ್ಮ ಜೊತೆಯಲ್ಲೇ ಬರಬೇಕೆಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮನು, ಮೇಲಧಿಕಾರಿಗಳ ಸೂಚನೆಯಂತೆ ಗೇಟ್ವರೆಗೆ ಮಾತ್ರ ತಮ್ಮ ಜವಾಬ್ದಾರಿ ಇದೆ ಎಂದು ತಿಳಿಸಿದ್ದಾರೆ. ಈ ವಿಚಾರವೇ ಮಾತಿನ ಚಕಮಕಿಗೆ ಕಾರಣವಾಗಿದ್ದು, ಕಾರ್ಯಕರ್ತರು ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವಿಯ ದರ್ಶನ ಮುಗಿಸಿ ವಾಪಸ್ ಬಂದು ವಾಹನ ಏರುವ ಸಂದರ್ಭದಲ್ಲಿಯೂ ಸಿಬ್ಬಂದಿ ತಮ್ಮೊಂದಿಗೆ ಬರದಿರುವುದಕ್ಕೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ದೂರು ನೀಡಿದ್ದಾರೆ.
⚡ ಸಿಬ್ಬಂದಿ ಅಮಾನತಿಗೆ ಡಿಸಿ ಎಚ್ಚರಿಕೆ?
ಕಾರ್ಯಕರ್ತರ ದೂರಿನಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಗ್ರಾಮ ಲೆಕ್ಕಾಧಿಕಾರಿ ಮನು ಅವರನ್ನು ಕರೆಸುವಂತೆ ಸೂಚಿಸಿ, ಅಮಾನತು ಮಾಡುವುದಾಗಿ ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಆಗಮಿಸಿರುವವರು ಅತಿಥಿಗಳು, ಅವರೊಂದಿಗೆ ಸಮಾಧಾನದಿಂದ ವರ್ತಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದ್ದಾರೆ.
ಸ್ಥಳದಲ್ಲಿದ್ದ ಸುಪ್ರೀತ್ ಎಂಬ ಅಧಿಕಾರಿಯ ವಿರುದ್ಧವೂ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಕಾಂಗ್ರೆಸ್ ಕಾರ್ಯಕರ್ತರ ಬಳಿ ಕ್ಷಮೆಯಾಚಿಸಿದ್ದಾರೆ.
ಈ ವೇಳೆ ಕಾರ್ಯಕರ್ತರು, "ಮೇಡಂ, ಹಾಸನಾಂಬ ದೇವಿಯನ್ನು ಇಲ್ಲೇ ನೋಡಿದಂತಾಯಿತು" ಎಂದು ವ್ಯಂಗ್ಯಭರಿತವಾಗಿ ಹೇಳಿ ಅಲ್ಲಿಂದ ತೆರಳಿದ್ದಾರೆ.
🙏 ಏಳನೇ ದಿನವೂ ಹಾಸನಾಂಬ ದರ್ಶನಕ್ಕೆ ಭಕ್ತರ ಮಹಾಪೂರ!
ಮತ್ತೊಂದೆಡೆ, ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಏಳನೇ ದಿನವೂ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ದೇವಾಲಯದ ಆವರಣ ಹಾಗೂ ದರ್ಶನದ ಸರತಿ ಸಾಲುಗಳಲ್ಲಿ ಭಕ್ತರು ಗಂಟೆಗಟ್ಟಲೆ ಕಾಯುತ್ತಿರುವ ದೃಶ್ಯ ಕಂಡುಬಂದಿದೆ.
ನಿನ್ನೆ ಮಧ್ಯರಾತ್ರಿ 12.30ರಿಂದ ಇಂದು ಬೆಳಿಗ್ಗೆ 5 ಗಂಟೆಯವರೆಗೆ ಅಲಂಕಾರ ಹಾಗೂ ನೈವೇದ್ಯದ ಹಿನ್ನೆಲೆಯಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗಿತ್ತು. ಹೀಗಾಗಿ, ದೇವಿಯ ದರ್ಶನಕ್ಕಾಗಿ ಭಕ್ತರು ರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಕಾಯುತ್ತಿದ್ದರು.
ಸಾಮಾನ್ಯ ಧರ್ಮದರ್ಶನದ ಸಾಲಿನಲ್ಲಿ ಮಾತ್ರವಲ್ಲದೆ, ₹1,000 ಹಾಗೂ ₹300 ವಿಶೇಷ ದರ್ಶನದ ಸಾಲುಗಳಲ್ಲಿಯೂ ಭಕ್ತರ ದಟ್ಟಣೆ ಕಂಡುಬಂದಿದೆ.
ಒಂದೆಡೆ ದೇವಿಯ ದರ್ಶನಕ್ಕಾಗಿ ಭಕ್ತರ ಉತ್ಸಾಹ, ಮತ್ತೊಂದೆಡೆ ಪ್ರೋಟೋಕಾಲ್ ವಿಚಾರವಾಗಿ ನಡೆದ ಅಧಿಕಾರಿಗಳು ಮತ್ತು ಕಾರ್ಯಕರ್ತರ ನಡುವಿನ ವಾಗ್ವಾದ – ಹಾಸನಾಂಬ ಉತ್ಸವದ ನಡುವೆ ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವರದಿ: ನವೀನ್ ಕುಮಾರ್
ಕರುನಾಡು ಟೈಮ್ಸ್ ಡಿಜಿಟಲ್ ಮೀಡಿಯಾ
🌐 ಇನ್ನಷ್ಟು ತಾಜಾ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com
ನಿಮ್ಮ ಊರಿನ ಸುದ್ದಿಗಳು, ರಾಜ್ಯದ ಪ್ರಮುಖ ಬೆಳವಣಿಗೆಗಳು ಹಾಗೂ ಕ್ಷಣಕ್ಷಣದ ಮಾಹಿತಿಗಾಗಿ ಕರುನಾಡು ಟೈಮ್ಸ್ ಜೊತೆಗಿರಿ.