ಉಡುಪಿ: ಬಾಳೆಕುದ್ರು ಮಠದ ಸ್ವಾಮೀಜಿ ನಾಪತ ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐತಿಹಾಸಿಕ ಬಾಳೆಕುದ್ರು ಮಠದಲ್ಲಿ ಪುರಾತನ ವಿಗ್ರಹಗಳು ನಾಪತ್ತೆಯಾಗಿರುವ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನಾಪತ್ತೆಯಾಗಿದ್ದು, ಮಠದಲ್ಲಿ ಪೂಜಿಸಲ್ಪಡುತ್ತಿದ್ದ ಅಮೂಲ್ಯ ವಿಗ್ರಹಗಳನ್ನು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮಠದ ಸ್ವಾಮೀಜಿ ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಆರು ಪುರಾತನ ವಿಗ್ರಹಗಳು ನಾಪತ್ತೆ!
ಮಠದಲ್ಲಿ ಹಲವು ವರ್ಷಗಳಿಂದ ಪೂಜಿಸಿಕೊಂಡು ಬರಲಾಗುತ್ತಿದ್ದ ನರಸಿಂಹದೇವರು, ಗಣಪತಿ, ಮಹಿಷಮರ್ದಿನಿ ಸೇರಿದಂತೆ ಒಟ್ಟು ಆರು ವಿಗ್ರಹಗಳು ನಾಪತ್ತೆಯಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಸಾವಿರಾರು ವರ್ಷಗಳ ಪರಂಪರೆಯುಳ್ಳ ವಿಗ್ರಹಗಳು ಕಾಣೆಯಾಗಿರುವ ಬಗ್ಗೆ ಮಠದ ಶಿಷ್ಯವರ್ಗ ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಪ್ರಶ್ನಿಸಿದಾಗ, ಹಳೆಯ ವಿಗ್ರಹಗಳನ್ನು ವಿಸರ್ಜನೆ ಮಾಡಿ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದರೆನ್ನಲಾಗಿದೆ. ಆದರೆ, ನಂತರ ಈ ವಿಗ್ರಹಗಳನ್ನು ಮಾರಾಟಕ್ಕೆ ಇಡಲಾಗಿತ್ತು ಎಂಬ ಮಾಹಿತಿ ಹೊರಬಂದಿದೆ.
ಸಾಮಾಜಿಕ ಜಾಲತಾಣದ ಸುಳಿವಿನಿಂದ ಪ್ರಕರಣ ಬೆಳಕಿಗೆ!
ಮಠದ ಶಿಷ್ಯ ಜಗದೀಶ್ ಐತಾಳ್ ಅವರು ಈ ಕುರಿತು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿದ್ದ ವಿಗ್ರಹಗಳ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದ ಮೂಲಕ ಮಾರಾಟಕ್ಕೆ ಸಂಬಂಧಿಸಿದ ವೆಬ್ಸೈಟ್ನಲ್ಲಿ ಕಾಣಿಸಿಕೊಂಡಿದ್ದವು ಎನ್ನಲಾಗಿದೆ.
ಈ ಸುಳಿವಿನ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸಿದಾಗ ವಿಗ್ರಹಗಳ ಮಾರಾಟದ ಆರೋಪ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಫ್ಐಆರ್ ದಾಖಲಾಗುತ್ತಿದ್ದಂತೆ ಸ್ವಾಮೀಜಿ ನಾಪತ್ತೆ?
ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಮಠಕ್ಕೆ ಬೀಗ ಹಾಕಿ ಅವರು ಅಲ್ಲಿಂದ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಸ್ವಾಮೀಜಿಯವರ ಪತ್ತೆ ಹಾಗೂ ನಾಪತ್ತೆಯಾಗಿರುವ ಪುರಾತನ ವಿಗ್ರಹಗಳ ಸುಳಿವಿಗಾಗಿ ತನಿಖೆ ಮುಂದುವರಿದಿದೆ.
ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಮಠದ ವಿಗ್ರಹಗಳೇ ನಾಪತ್ತೆಯಾಗಿರುವ ಆರೋಪ ಭಕ್ತರು ಹಾಗೂ ಶಿಷ್ಯವರ್ಗದಲ್ಲಿ ತೀವ್ರ ಕಳವಳ ಮೂಡಿಸಿದೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ವರದಿ: ನವೀನ್ ಕುಮಾರ್
ಕರುನಾಡು ಟೈಮ್ಸ್ ಡಿಜಿಟಲ್ ಮೀಡಿಯಾ