ಚಿಂತಾಮಣಿಯಲ್ಲಿ ದುರಂತ: 3 ತಿಂಗಳ ಗರ್ಭಿಣಿ ಆತ್ಮಹತ್ಯೆ; ಪತಿ ಬಂಧನ
ಚಿಕ್ಕಬಳ್ಳಾಪುರ: ಮದುವೆಯಾಗಿ ಕೇವಲ ಒಂಬತ್ತು ತಿಂಗಳಲ್ಲೇ ಮೂರು ತಿಂಗಳ ಗರ್ಭಿಣಿಯಾಗಿದ್ದ 24 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ (24) ಮೃತ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿ ರಘು ಅವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂ ತಾಲೂಕಿನ ಬಿದರಹಳ್ಳಿ ಗ್ರಾಮದ ಪ್ರತಿಭಾ ಅವರನ್ನು ನಾಯನಹಳ್ಳಿ ಗ್ರಾಮದ ಬಚ್ಚನ್ನಗಾರಿ ಕೃಷ್ಣಾರೆಡ್ಡಿ ಅವರ ಪುತ್ರ ರಘು ಅವರಿಗೆ 2026ರ ಜನವರಿ 29ರಂದು ಚಿಂತಾಮಣಿಯ ಸುವರ್ಣ ಕಲ್ಯಾಣ ಮಂಟಪದಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಪದವೀಧರೆಯಾಗಿದ್ದ ಪ್ರತಿಭಾ ಮೂರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಅವರ ಪೋಷಕರು ತಿಳಿಸಿದ್ದಾರೆ.
ಮೃತ ಪ್ರತಿಭಾ ಅವರ ಸಾವಿನ ಬೆನ್ನಲ್ಲೇ ಗಂಡನ ಮನೆಯವರ ವಿರುದ್ಧ ಕಿರುಕುಳದ ಗಂಭೀರ ಆರೋಪಗಳು ಕೇಳಿಬಂದಿವೆ.
Tags:#ಚಿಂತಾಮಣಿ #ಚಿಕ್ಕಬಳ್ಳಾಪುರ #ನಾಯನಹಳ್ಳಿ #ಪ್ರತಿಭಾ #ಗರ್ಭಿಣಿಮಹಿಳೆ #ಆತ್ಮಹತ್ಯೆ #ಪತಿಬಂಧನ #ಕೌಟುಂಬಿಕಕಿರುಕುಳ #ಮಹಿಳಾಸಾವು #ಕರ್ನಾಟಕಸುದ್ದಿ #ಕ್ರೈಂನ್ಯೂಸ್ #ChintamaniNews #ChikkaballapurNews #PregnantWomanDeath #KarnatakaCrimeNews #KarunaaduTimes
ಸರಿಯಾಗಿ ಊಟ ನೀಡದೆ, ದಿನಕ್ಕೆ ಒಮ್ಮೆ ಮಾತ್ರ ಅಡುಗೆ ಮಾಡಿಸುತ್ತಿದ್ದರು. ಕೊಳೆತ ಆಹಾರ ಪದಾರ್ಥಗಳು ಹಾಗೂ ತರಕಾರಿಗಳನ್ನು ಬಳಸುವಂತೆ ಒತ್ತಾಯಿಸುತ್ತಿದ್ದರು. ಗಂಡನ ಮನೆಯ ವ್ಯವಹಾರಗಳ ಬಗ್ಗೆಯೂ ಮಗಳಿಗೆ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಈ ವಿಚಾರಗಳನ್ನು ಪ್ರತಿಭಾ ಸುಮಾರು ಒಂದು ತಿಂಗಳ ಹಿಂದೆ ತಮ್ಮ ಬಳಿ ಹೇಳಿಕೊಂಡಿದ್ದಳು ಎಂದು ತಂದೆ ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ಮಗಳ ಸಂಸಾರದ ಸಣ್ಣಪುಟ್ಟ ಸಮಸ್ಯೆಗಳಿರಬಹುದು, ಅವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಆರಂಭದಲ್ಲಿ ಸುಮ್ಮನಾಗಿದ್ದೆವು. ಆದರೆ ಈಗ ಮಗಳನ್ನೇ ಕಳೆದುಕೊಂಡಿದ್ದೇವೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಇನ್ನು ಪ್ರತಿಭಾ ಗಂಭೀರ ಸ್ಥಿತಿಯಲ್ಲಿದ್ದಾಳೆ, ಕೂಡಲೇ ಬರುವಂತೆ ಗಂಡನ ಮನೆಯಿಂದ ದೂರವಾಣಿ ಕರೆ ಬಂದಿತ್ತು ಎಂದು ಸಹೋದರ ಪವನ್ ತಿಳಿಸಿದ್ದಾರೆ.
ಪ್ರತಿಭಾ ಸಾವಿನ ಹಿಂದೆ ಕೌಟುಂಬಿಕ ಕಿರುಕುಳದ ಪಾತ್ರವಿದೆಯೇ ಎಂಬ ಅನುಮಾನಗಳನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ವರದಿ: ನವೀನ್ ಕುಮಾರ್
www.karunaadutimes.com