ಬೆಳಗಾವಿ: ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯನ್ನೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಪ್ರಿಯಕರನ ಮೇಲೆ ಕೇಳಿಬಂದಿದೆ. ಈ ಪ್ರಕರಣದಲ್ಲಿ ಕೇಂದ್ರ ಸಶಸ್ತ್ರ ಸೀಮಾ ಬಲದ (SSB) ಪೇದೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವತಿಯನ್ನು 23 ವರ್ಷದ ರಕ್ಷಿತಾ ಸರಿಕರ್ ಎಂದು ಗುರುತಿಸಲಾಗಿದೆ. ಬಸಪ್ಪ ಸಾತನ್ನವಣ್ಣರ್ ಎಂಬಾತನೇ ಹತ್ಯೆ ಆರೋಪ ಎದುರಿಸುತ್ತಿರುವ ಪೇದೆ.
ಮಾಹಿತಿಯ ಪ್ರಕಾರ, ಹಾರೋಗೇರಿ ಗ್ರಾಮದ ರಕ್ಷಿತಾ ಹಾಗೂ ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಕ್ಟೋಬರ್ 28ರಂದು ಸುತ್ತಾಡಿಕೊಂಡು ಬರೋಣ ಎಂದು ರಕ್ಷಿತಾಳನ್ನು ಕರೆದೊಯ್ದಿದ್ದ ಬಸಪ್ಪ, ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಬಳಿಕ ಹುಡುಕಾಟದ ನಾಟಕ!
ಯುವತಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಬಸಪ್ಪ ತನ್ನ ಊರಿಗೆ ವಾಪಸ್ ಬಂದಿದ್ದಾನೆ. ಅಷ್ಟೇ ಅಲ್ಲದೆ, ರಕ್ಷಿತಾಳ ಸಹೋದರನೊಂದಿಗೆ ಸೇರಿ ಆಕೆಯನ್ನು ಹುಡುಕುವ ಪ್ರಯತ್ನವನ್ನೂ ಮಾಡಿದ್ದಾನೆ ಎನ್ನಲಾಗಿದೆ.
ಇತ್ತ ರಕ್ಷಿತಾ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಸಹೋದರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾನೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಹಾರೋಗೇರಿ ಪೊಲೀಸರು ಬಸಪ್ಪನನ್ನು ಕರೆಸಿ ವಿಚಾರಣೆ ನಡೆಸಿದಾಗ, ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರೀತಿಯ ಸಂಬಂಧವೊಂದು ಇಂತಹ ದುರಂತ ಅಂತ್ಯ ಕಂಡಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ವರದಿ: ನವೀನ್ ಕುಮಾರ್
ಕರುನಾಡು ಟೈಮ್ಸ್ | www.karunaadutimes.com
🌐 ಇನ್ನಷ್ಟು ಕ್ಷಣಕ್ಷಣದ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com