ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ಖಾಸಗಿ ಫೋಟೋಗಳು ಹಾಗೂ ವೀಡಿಯೊಗಳನ್ನು ಅನುಮತಿಯಿಲ್ಲದೆ ಹಂಚಿಕೆ ಮಾಡುವ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಖಾಸಗಿ ದೃಶ್ಯಗಳನ್ನು ವೈರಲ್ ಮಾಡುವುದು, ಬ್ಲ್ಯಾಕ್ಮೇಲ್ ಮಾಡುವುದು, ಸೆಕ್ಸ್ಟೋರ್ಷನ್ ಹಾಗೂ ರಿವೆಂಜ್ ಪೋರ್ನೋಗ್ರಫಿ ರೀತಿಯ ಅಪರಾಧಗಳ ವಿರುದ್ಧ ತಕ್ಷಣ ಪ್ರಕರಣ ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ Dr. M. A. Saleem ಕಟ್ಟುನಿಟ್ಟಿನ ನಿರ್ದೇಶನ ಹೊರಡಿಸಿದ್ದಾರೆ.
ಹೊಸ ಮಾರ್ಗಸೂಚಿಯ ಪ್ರಕಾರ, ಯಾವುದೇ ವ್ಯಕ್ತಿ ಖಾಸಗಿ ಫೋಟೋ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೂ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ನೀಡಿದಂತೆ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಅನುಮತಿಯಿಲ್ಲದೆ ಇಂತಹ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ಕಾನೂನುಬದ್ಧ ಅಪರಾಧವಾಗಿದ್ದು, ಸಂಬಂಧಿತ ಆರೋಪಿಗಳ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಖಾಸಗಿ ದೃಶ್ಯಗಳನ್ನು ಬಳಸಿಕೊಂಡು ಹಣಕ್ಕಾಗಿ ಬೆದರಿಕೆ ಹಾಕುವುದು, ವೈಯಕ್ತಿಕ ಲಾಭ ಪಡೆಯಲು ಒತ್ತಡ ಹೇರುವುದು ಹಾಗೂ ಮಾನಹಾನಿ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಮಾರ್ಗಸೂಚಿಯಂತೆ, ದೂರು ಸ್ವೀಕರಿಸುವಲ್ಲಿ ವಿಳಂಬ ಮಾಡಬಾರದು. ಘಟನೆ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರೂ ‘ಝೀರೋ ಎಫ್ಐಆರ್’ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು. ದೂರುದಾರರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಬೇಕು ಮತ್ತು ಮಹಿಳಾ ಸಂತ್ರಸ್ತೆಯ ಪ್ರಕರಣಗಳನ್ನು ಮಹಿಳಾ ಅಧಿಕಾರಿಗಳೇ ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಇದಲ್ಲದೆ, ಸೈಬರ್ ಅಪರಾಧ ಘಟಕಗಳ ಸಹಯೋಗದಲ್ಲಿ ಡಿಜಿಟಲ್ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ ತಾಂತ್ರಿಕ ಹಾಗೂ ಫೋರೆನ್ಸಿಕ್ ತನಿಖೆ ನಡೆಸುವಂತೆ ನಿರ್ದೇಶಿಸಲಾಗಿದೆ. ದೂರು ದಾಖಲಿಸಲು ನಿರಾಕರಿಸುವುದು ಅಥವಾ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಡಿಜಿ-ಐಜಿಪಿ ಎಚ್ಚರಿಕೆ ನೀಡಿದ್ದಾರೆ.