ಶಿವಮೊಗ್ಗ: ವರ್ಷಗಳ ಪರಿಶ್ರಮದಿಂದ ಬೆಳೆಸಿದ ಅಡಿಕೆ ತೋಟ ಕ್ಷಣಾರ್ಧದಲ್ಲಿ ನೆಲಸಮವಾದರೆ ರೈತನ ಮನಸ್ಥಿತಿ ಹೇಗಿರಬಹುದು? ಇಂತಹದ್ದೇ ನೋವಿನ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತ್ಯಾವರೆತೆಪ್ಪ–ವಡ್ಡಿಗೇರಿ ಗ್ರಾಮದಲ್ಲಿ ನಡೆದಿದೆ. ಎರಡು ಎಕರೆ ಪ್ರದೇಶದಲ್ಲಿ ಸುಮಾರು 15 ವರ್ಷಗಳಿಂದ ಬೆಳೆಸಿದ್ದ ಅಡಿಕೆ ತೋಟವನ್ನು ತಾಲೂಕು ಆಡಳಿತ ತೆರವುಗೊಳಿಸಿದ್ದು, ತೋಟ ಕಳೆದುಕೊಂಡ ರೈತ ಹಾಗೂ ಕಾಂಗ್ರೆಸ್ ಮುಖಂಡ ದೇವರಾಜ್ ಅವರು ತಮ್ಮ ಅಳಲನ್ನು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.
ಅಡಿಕೆ ತೋಟ ತೆರವುಗೊಳಿಸಿದ ಸ್ಥಳಕ್ಕೆ ನವೆಂಬರ್ 3ರಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಬಿಜೆಪಿ ಮುಖಂಡರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ರೈತ ದೇವರಾಜ್ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ನಮ್ಮ ಪಕ್ಷದ ಮುಖಂಡರ ಗಮನಕ್ಕೆ ಸಮಸ್ಯೆಯನ್ನು ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ನನ್ನ ಸಂಕಷ್ಟವನ್ನು ಆಲಿಸಲು ಯಾರೂ ಮುಂದೆ ಬರಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ರೈತನ ಅಳಲು ಆಲಿಸಿದ ಬಿಜೆಪಿ ನಾಯಕರು, ಯಾವುದೇ ಮುನ್ಸೂಚನೆ ಹಾಗೂ ನೋಟಿಸ್ ನೀಡದೆ ವರ್ಷಗಳ ಕಾಲ ಬೆಳೆಸಿದ್ದ ಅಡಿಕೆ ಮರಗಳನ್ನು ತೆರವುಗೊಳಿಸಿರುವ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಂಸದ ಬಿ.ವೈ.ರಾಘವೇಂದ್ರ ಅವರು ರೈತ ಕುಟುಂಬಕ್ಕೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದಾರೆ.
ಅಧಿಕಾರಿಗಳ ವಿರುದ್ಧ ಬಿಜೆಪಿ–ಜೆಡಿಎಸ್ ಆಕ್ರೋಶ
ಅಕ್ಟೋಬರ್ 29ರಂದು ಎರಡು ಎಕರೆ ಪ್ರದೇಶದ ಅಡಿಕೆ ತೋಟವನ್ನು ತಾಲೂಕು ಆಡಳಿತ ತೆರವುಗೊಳಿಸಿತ್ತು. ಈ ಕ್ರಮವನ್ನು ಖಂಡಿಸಿ ತಾಲೂಕು ಬಿಜೆಪಿ ಮತ್ತು ಜೆಡಿಎಸ್ ಘಟಕಗಳು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿವೆ.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ, ರೈತರ ತೋಟವನ್ನು ಏಕಾಏಕಿ ತೆರವುಗೊಳಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಭೂಮಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳು ಹಾಗೂ ಕಾನೂನು ಮಾಹಿತಿಯ ಅರಿವು ಪ್ರತಿಯೊಬ್ಬ ರೈತನಿಗೂ ಇರುವುದಿಲ್ಲ. ಹಲವು ತಲೆಮಾರುಗಳಿಂದ ಪೂರ್ವಜರು ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ನಂಬಿಕೊಂಡು ರೈತರು ಕೃಷಿ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿ, ಕಾನೂನು ಪ್ರಕ್ರಿಯೆಯಂತೆ ನೋಟಿಸ್ ಜಾರಿಗೊಳಿಸಬೇಕಿತ್ತು. ಇದರಿಂದ ರೈತರಿಗೆ ತಮ್ಮ ಹಕ್ಕುಗಳಿಗಾಗಿ ಕಾನೂನು ಹೋರಾಟ ನಡೆಸಲು ಅವಕಾಶ ಸಿಗುತ್ತಿತ್ತು. ಆದರೆ, ಹತ್ತಾರು ವರ್ಷಗಳಿಂದ ಬೆಳೆದು ನಿಂತಿದ್ದ ಅಡಿಕೆ ಮರಗಳನ್ನು ಏಕಾಏಕಿ ತೆರವುಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ವಿರುದ್ಧವೂ ವಾಗ್ದಾಳಿ
ಇದೇ ವೇಳೆ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧವೂ ಹರತಾಳು ಹಾಲಪ್ಪ ವಾಗ್ದಾಳಿ ನಡೆಸಿದರು. ರೈತರ ಬದುಕಿನ ಬಗ್ಗೆ ಸಚಿವರಿಗೆ ಕಾಳಜಿ ಇಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲದ ಆಡಳಿತದಿಂದಾಗಿ ರೈತರು ಇಂತಹ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು. ರೈತಪರ ಕಾಳಜಿ ಇಲ್ಲದ ಜನಪ್ರತಿನಿಧಿಗಳಿಗೆ ಜನಸೇವೆ ಮಾಡುವ ನೈತಿಕ ಅರ್ಹತೆಯಿಲ್ಲ. ಮುಂಬರುವ 2028ರ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ
ಪ್ರತಿಭಟನೆ ಮುಗಿದ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿದ ಹರತಾಳು ಹಾಲಪ್ಪ, ಅಡಿಕೆ ತೋಟ ತೆರವುಗೊಳಿಸಲು ನೀಡಿರುವ ಆದೇಶದ ಪ್ರತಿಯನ್ನು ತೋರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ರೈತನಿಗೆ ಯಾವುದೇ ನೋಟಿಸ್ ನೀಡದೆ ತೆರವು ಕಾರ್ಯಾಚರಣೆ ನಡೆಸಿದ್ದೇಕೆ? ಸರ್ವೆ ನಡೆಸಿದ ದಿನಾಂಕದ ದಾಖಲೆ ಎಲ್ಲಿದೆ? ಸರ್ವೆಯರ್ ಯಾವ ಅಧಿಕಾರದ ಆಧಾರದ ಮೇಲೆ ತೋಟ ತೆರವುಗೊಳಿಸಲು ಮುಂದಾದರು? ಪೊಲೀಸರಿಗೂ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತೇ? ಕಾರ್ಯಾಚರಣೆ ವೇಳೆ ಅನಾಹುತ ಸಂಭವಿಸಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು? ಲೋಕಾಯುಕ್ತದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ತೆರವು ಕಾರ್ಯಾಚರಣೆ ನಡೆಸಿದ್ದೇಕೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಒಟ್ಟಿನಲ್ಲಿ, 15 ವರ್ಷಗಳ ಕಾಲ ಬೆವರು ಸುರಿಸಿ ಬೆಳೆಸಿದ ಅಡಿಕೆ ತೋಟವನ್ನು ಕಳೆದುಕೊಂಡ ರೈತನ ಕಣ್ಣೀರು ಇದೀಗ ಸೊರಬ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತೆರವು ಕಾರ್ಯಾಚರಣೆಯ ಕಾನೂನುಬದ್ಧತೆ, ರೈತನಿಗೆ ನೋಟಿಸ್ ನೀಡಲಾಗಿತ್ತೇ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದು, ಈ ಪ್ರಕರಣದಲ್ಲಿ ಮುಂದಿನ ಆಡಳಿತಾತ್ಮಕ ಕ್ರಮಗಳೇನು ಎಂಬುದನ್ನು ಕಾದುನೋಡಬೇಕಿದೆ.
ವರದಿ: ನವೀನ್ ಕುಮಾರ್
Hashtags:#Shivamogga #Soraba #FarmerIssue #ArecanutFarm #BYRaghavendra #HarataluHalappa #BJP #JDS #KarnatakaNews #ರೈತರಸಮಸ್ಯೆ #ಶಿವಮೊಗ್ಗಸುದ್ದಿ #ಸೊರಬಸುದ್ದಿ #ಕರುನಾಡುಟೈಮ್ಸ್