ಬೆಂಗಳೂರು: ಕಳ್ಳತನಕ್ಕೆ ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿಯೊಬ್ಬ ತಪ್ಪಿಸಿಕೊಳ್ಳುವ ಉದ್ದೇಶದಿಂದ ಯುವತಿಯನ್ನೇ ಗುರಾಣಿಯಾಗಿ ಬಳಸಿಕೊಂಡು ನಡುರಸ್ತೆಯಲ್ಲಿ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನನ್ನು ಹಿಡಿಯಲು ಮುಂದಾದರೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಆಕೆಯನ್ನು ರಸ್ತೆಯಲ್ಲೇ ಎಳೆದಾಡಿದ್ದಾನೆ. ಆರೋಪಿಯ ಈ ವರ್ತನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಯುವತಿಯನ್ನು ಗುರಾಣಿಯಾಗಿಸಿಕೊಂಡು ಆರೋಪಿ ರಂಪಾಟ!
ಪ್ರಭುರಾಜ್ ಅಲಿಯಾಸ್ ರಾಜ್ ಬಂಧಿತ ಆರೋಪಿಯಾಗಿದ್ದು, ಈತ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಕಳ್ಳತನಕ್ಕೆ ಬಂದಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ವೇಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ಸಮೀಪದ ಅಂಗಡಿಯಲ್ಲಿದ್ದ ಯುವತಿಯೊಬ್ಬಳನ್ನು ಬಲವಂತವಾಗಿ ಎಳೆದಾಡಿದ್ದಾನೆ. ತನ್ನನ್ನು ಹಿಡಿಯಲು ಯಾರಾದರೂ ಮುಂದಾದರೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾರ್ವಜನಿಕರ ಧೈರ್ಯಕ್ಕೆ ಕೊನೆಗೂ ಸಿಕ್ಕಿಬಿದ್ದ ಖದೀಮ!
ಆರೋಪಿಯ ಉಪಟಳ ಮಿತಿಮೀರಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ಧೈರ್ಯದಿಂದ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಇಂದಿರಾನಗರ ಪೊಲೀಸರು ಪ್ರಭುರಾಜ್ ಅಲಿಯಾಸ್ ರಾಜ್ನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಳ್ಳತನದ ಆರೋಪದ ಜೊತೆಗೆ ಯುವತಿಯನ್ನು ಎಳೆದಾಡಿ ಬೆದರಿಕೆ ಹಾಕಿರುವ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮಹಿಳೆಯರ ಸುರಕ್ಷತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳನ್ನು ತಡೆಯುವ ಅಗತ್ಯದ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
ವರದಿ: ನವೀನ್ ಕುಮಾರ್
Tags:#Bengaluru #Indiranagar #BengaluruCrime #TheftCase #CrimeNews #WomenSafety #BengaluruPolice #ViralVideo #KarnatakaNews #KarunaaduTimes #ಕರ್ನಾಟಕಸುದ್ದಿ #ಬೆಂಗಳೂರುಸುದ್ದಿ #ಇಂದಿರಾನಗರ