ಚಿಕ್ಕಬಳ್ಳಾಪುರ: ಹಾಲಿನ ದರ ಹೆಚ್ಚಳದ ಮೂಲಕ ಹೈನುಗಾರಿಕೆ ಅವಲಂಬಿತ ರೈತರಿಗೆ ಹೆಚ್ಚುವರಿ ಆದಾಯದ ನಿರೀಕ್ಷೆ ಮೂಡಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಹಾಲು ಉತ್ಪಾದಕರು ಸಂಭ್ರಮಾಚರಣೆ ನಡೆಸಿದರು. ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಚಿಮುಲ್) ನಿರ್ದೇಶಕರು ಹಾಗೂ ರೈತರು, ನಂದಿ ಕ್ರಾಸ್ ಬಳಿಯ ಚಿಮುಲ್ ಮೆಗಾ ಡೈರಿ ಮುಂಭಾಗದಲ್ಲಿ ಸಂಭ್ರಮ ಹಂಚಿಕೊಂಡರು.
ರಾಜ್ಯ ಸರ್ಕಾರ ಹಾಲಿನ ಪ್ರಸ್ತುತ ದರದ ಮೇಲೆ ಪ್ರತಿ ಲೀಟರ್ಗೆ ಹೆಚ್ಚುವರಿಯಾಗಿ 8 ರೂಪಾಯಿ ನೀಡುವುದಾಗಿ ಘೋಷಿಸಿದೆ. ಈ ಪೈಕಿ 1 ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ಹಾಗೂ ಉಳಿದ 7 ರೂಪಾಯಿಯನ್ನು ನೇರವಾಗಿ ಹಾಲು ಉತ್ಪಾದಕ ರೈತರಿಗೆ ನೀಡಲು ನಿರ್ಧರಿಸಲಾಗಿದೆ.
ಸರ್ಕಾರದ ಈ ಘೋಷಣೆಯಿಂದ ಸಂತಸಗೊಂಡ ರೈತರು ಮತ್ತು ಚಿಮುಲ್ ನಿರ್ದೇಶಕರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಭಾವಚಿತ್ರಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ಕೃತಜ್ಞತೆ ಮತ್ತು ಸಂತಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆಯನ್ನೂ ನಡೆಸಿದರು.
ಹೈನುಗಾರಿಕೆಯನ್ನೇ ಜೀವನಾಧಾರವಾಗಿಸಿಕೊಂಡಿರುವ ಸಾವಿರಾರು ರೈತ ಕುಟುಂಬಗಳಿಗೆ ಹಾಲಿನ ದರ ಹೆಚ್ಚಳ ಆರ್ಥಿಕವಾಗಿ ನೆರವಾಗಲಿದೆ ಎಂದು ಚಿಮುಲ್ ನಿರ್ದೇಶಕ ಅಶ್ವಸ್ಥನಾರಾಯಣ ಬಾಬು ಹಾಗೂ ಭರಣಿ ವೆಂಕಟೇಶ್ ಅಭಿಪ್ರಾಯಪಟ್ಟರು.
ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ಘೋಷಿಸಿರುವ 7 ರೂಪಾಯಿ ನೇರವಾಗಿ ರೈತರಿಗೆ ತಲುಪುವುದರಿಂದ ಹಾಲು ಉತ್ಪಾದಕರ ಆದಾಯಕ್ಕೆ ಬಲ ಸಿಗಲಿದೆ. ಹೈನುಗಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಸ್ವಾಗತಾರ್ಹ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಒಟ್ಟಾರೆ, ಹಾಲಿನ ದರ ಹೆಚ್ಚಳದ ನಿರ್ಧಾರ ಚಿಕ್ಕಬಳ್ಳಾಪುರದ ಹೈನುಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ವರದಿ: ನವೀನ್ ಕುಮಾರ್
🌐 ಇಂತಹ ಮತ್ತಷ್ಟು ಸ್ಥಳೀಯ, ರಾಜ್ಯ ಹಾಗೂ ಪ್ರಮುಖ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ:
👉 www.karunaadutimes.com
📲 ಸುದ್ದಿಗಳನ್ನು ಓದಿ, ಹಂಚಿಕೊಳ್ಳಿ – ಕರುನಾಡಿನ ಸುದ್ದಿಗಳಿಗಾಗಿ ಕರುನಾಡು ಟೈಮ್ಸ್ಗೆ ಭೇಟಿ ನೀಡಿ.