ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ, 23 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಕಲೇಶಪುರ ತಾಲೂಕಿನ ಬಾಳಗೋಡು ಗ್ರಾಮದಲ್ಲಿ ನಡೆದಿದೆ. ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದೇ ಯುವತಿಯ ಮಾನಸಿಕ ವೇದನೆಗೆ ಕಾರಣವಾಯಿತು ಎನ್ನುವ ಆರೋಪ ಕೇಳಿಬಂದಿದೆ.
ಮೃತ ಯುವತಿಯನ್ನು ಬಾಳಗೋಡು ಗ್ರಾಮದ ಭವಿತಾ ಮತ್ತು ನಾಗೇಶ್ ದಂಪತಿಯ ಪುತ್ರಿ ಹಿಮಾ (23) ಎಂದು ಗುರುತಿಸಲಾಗಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಹಿಮಾ, ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದಳು. ಆದರೆ, ಈ ದುರಂತ ಘಟನೆ ಕುಟುಂಬವನ್ನು ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ.
ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಆರೋಪ
ಪ್ರಾಥಮಿಕ ಶಿಕ್ಷಣದ ಸಮಯದಿಂದಲೂ ಪರಿಚಯವಿದ್ದ ನೌಶಾದ್ ಎಂಬ ಯುವಕ ಹಿಮಾಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಇಬ್ಬರೂ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ತೆಗೆದಿದ್ದ ಫೋಟೋಗಳನ್ನು ನೌಶಾದ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂಬ ಆರೋಪವಿದೆ.
ಈ ಫೋಟೋಗಳನ್ನು ತೆಗೆದುಹಾಕುವಂತೆ ಹಿಮಾ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಅವುಗಳನ್ನು ಅಳಿಸದೆ, ಇನ್ನಷ್ಟು ಫೋಟೋಗಳನ್ನು ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎನ್ನುವುದು ಕುಟುಂಬದ ಕಡೆಯಿಂದ ಕೇಳಿಬಂದಿರುವ ಆರೋಪವಾಗಿದೆ.
ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ
ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕದ ಹಿನ್ನೆಲೆಯಲ್ಲಿ ತೀವ್ರ ಮನನೊಂದಿದ್ದ ಹಿಮಾ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ. ಬಳಿಕ ಆಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಜೀವ ಉಳಿಸಲಾಗದೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚೆಗಷ್ಟೇ ತಂದೆ ನಾಗೇಶ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಕುಟುಂಬದ ದುಃಖ ಮತ್ತಷ್ಟು ಮನಕಲಕುವಂತಾಗಿದೆ.
ಆರೋಪಿ ವಿರುದ್ಧ ಪ್ರಕರಣ ದಾಖಲು – ತನಿಖೆಗೆ ಆಗ್ರಹ
ಯುವತಿಯ ಅಂತಿಮ ದರ್ಶನ ಪಡೆದ ಶಾಸಕ ಸಿಮೆಂಟ್ ಮಂಜು, ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ನೌಶಾದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಯುವತಿಯ ಸಾವಿಗೆ ನಿಖರ ಕಾರಣವೇನು? ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೆ ಹಾಗೂ ಕಿರುಕುಳದ ಆರೋಪಗಳ ಹಿಂದೆ ಇರುವ ಸತ್ಯಾಂಶಗಳೇನು? ಎಂಬುದನ್ನು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ವರದಿ: ನವೀನ್ ಕುಮಾರ್
Tags:#Sakleshpur #HassanNews #HimaCase #KarnatakaNews #CrimeNews #SocialMediaHarassment #HassanCrime #SakleshpurNews #WomenSafety #KannadaNews #KarunaaduTimes #ಕರ್ನಾಟಕಸುದ್ದಿ #ಹಾಸನಸುದ್ದಿ #ಸಕಲೇಶಪುರ