ಹಾಸನ: ವಿಶ್ವಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವದ ನಡುವೆಯೇ ಆಹ್ವಾನ ಪತ್ರಿಕೆ ಹಾಗೂ ವಿಶೇಷ ದರ್ಶನದ ಪಾಸ್ ಹಂಚಿಕೆ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಬಾರಿ ಹಾಸನಾಂಬೆ ದರ್ಶನಕ್ಕೆ ತಾವು ತೆರಳುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಘೋಷಿಸಿದ್ದು, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನಾಂಬೆ ದೇವಿಯ ದರ್ಶನಕ್ಕೆ ತಮಗೆ ಸೂಕ್ತ ರೀತಿಯಲ್ಲಿ ಆಹ್ವಾನ ನೀಡಿಲ್ಲ ಎಂಬುದು ರೇವಣ್ಣ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 30 ವರ್ಷಗಳಿಂದ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಮಾಜಿ ಸಚಿವನಿಗೆ ಗ್ರಾಮ ಸಹಾಯಕನ ಮೂಲಕ ಆಹ್ವಾನ ಪತ್ರಿಕೆ ಕಳುಹಿಸಿರುವುದು ತಮ್ಮ ಘನತೆಗೆ ತಕ್ಕುದಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಮಾತನಾಡಿದ ರೇವಣ್ಣ, "ನನ್ನನ್ನು ಗೌರವದಿಂದ ಆಹ್ವಾನಿಸದ ಮೇಲೆ ನಾನು ಯಾಕೆ ಮಹೋತ್ಸವಕ್ಕೆ ಹೋಗಬೇಕು? ಈ ಬಾರಿ ಹಾಸನಾಂಬೆ ದರ್ಶನಕ್ಕೆ ತೆರಳುವುದಿಲ್ಲ. ಇಲ್ಲಿಂದಲೇ ಆ ತಾಯಿಗೆ ಕೈಮುಗಿಯುತ್ತೇನೆ. ನಮ್ಮ ತಂದೆ-ತಾಯಿಗೆ ಕಣ್ಣೀರು ಹಾಕಿಸಿದವರನ್ನು ನೋಡಿಕೊಳ್ಳುವಂತೆ ದೇವಿಯಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.
ಪಾಸ್ ಹಂಚಿಕೆಯಲ್ಲಿ ತಾರತಮ್ಯದ ಆರೋಪ!
ಹಾಸನಾಂಬೆ ಮಹೋತ್ಸವದ ವಿಶೇಷ ದರ್ಶನದ ಪಾಸ್ ಹಂಚಿಕೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ. ಸಂಸದರು ಹಾಗೂ ಇತರ ಗಣ್ಯರ ಮನೆಗಳಿಗೆ ತೆರಳಿ ಪಾಸ್ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ತಮಗೆ ಆಹ್ವಾನ ಪತ್ರಿಕೆಯನ್ನೇ ಸರಿಯಾಗಿ ನೀಡಿಲ್ಲ ಎಂದು ದೂರಿದ್ದಾರೆ.
ಜಿಲ್ಲೆಯಲ್ಲಿ ಜೆಡಿಎಸ್ನ ನಾಲ್ವರು ಹಾಗೂ ಬಿಜೆಪಿಯ ಇಬ್ಬರು ಶಾಸಕರಿದ್ದರೂ ಮಹೋತ್ಸವದ ಫ್ಲೆಕ್ಸ್ಗಳಲ್ಲಿ ಜನಪ್ರತಿನಿಧಿಗಳ ಫೋಟೋಗಳನ್ನು ಹಾಕಿಲ್ಲ. ಇದೊಂದು ಕಾಂಗ್ರೆಸ್ ಕಾರ್ಯಕ್ರಮದಂತೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
"ಹಾಸನಾಂಬೆ ಮಹೋತ್ಸವ ಯಾರ ಮನೆಯ ಹಣದಿಂದ ನಡೆಯುತ್ತಿದೆ? ದೇವಿಯ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ಸೂಕ್ತ ಗೌರವ ನೀಡಬೇಕು. ಒಂದು ಸ್ವಾಗತ ಕಮಾನಿಗೆ 25 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಶಾಸಕರಿಗೆ ಕನಿಷ್ಠ ಗೌರವ ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಏನಾದರೂ ತಮ್ಮ ಮನೆಯಿಂದ ಹಣ ತಂದು ಖರ್ಚು ಮಾಡುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ.
ಬುಧವಾರದವರೆಗೆ ಗಡುವು – ಕಾರ್ಯಕರ್ತರನ್ನು ಕರೆತರುವ ಎಚ್ಚರಿಕೆ!
ವಿಶೇಷ ದರ್ಶನದ ಪಾಸ್ಗಳನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಬೇಕು. ಇಲ್ಲವಾದರೆ ಎಲ್ಲರೂ ಸಾಮಾನ್ಯ ಸರದಿಯಲ್ಲಿಯೇ ದೇವಿಯ ದರ್ಶನ ಪಡೆಯುವ ವ್ಯವಸ್ಥೆ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.
ಬುಧವಾರದವರೆಗೆ ಸಮಸ್ಯೆ ಬಗೆಹರಿಸಲು ಗಡುವು ನೀಡಿರುವ ಅವರು, ತಮ್ಮ ಕಾರ್ಯಕರ್ತರನ್ನು ಮಹೋತ್ಸವಕ್ಕೆ ಕರೆತರುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಗತ್ಯವಿದ್ದರೆ 2,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಿ, ತಾವೇ ಮುಂದೆ ನಿಲ್ಲುವುದಾಗಿ ಹೇಳಿದ್ದಾರೆ.
ಈ ಹಿಂದೆ ನೀಡಿದ್ದ ಪಾಸ್ಗಳನ್ನು ಕೂಡ ಗೌರವಯುತವಾಗಿ ನೀಡಿಲ್ಲ ಎಂಬ ಕಾರಣಕ್ಕೆ ಹಿಂದಿರುಗಿಸಿರುವುದಾಗಿ ರೇವಣ್ಣ ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಾಸನಾಂಬೆ ಜಾತ್ರೆಯ ಸಂಭ್ರಮದ ನಡುವೆಯೇ ಆಹ್ವಾನ ಪತ್ರಿಕೆ, ವಿಶೇಷ ದರ್ಶನದ ಪಾಸ್ ಹಾಗೂ ಜನಪ್ರತಿನಿಧಿಗಳ ಗೌರವದ ವಿಚಾರ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ರೇವಣ್ಣ ಅವರ ಆರೋಪಗಳಿಗೆ ಜಿಲ್ಲಾಡಳಿತ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ? ಬುಧವಾರದೊಳಗೆ ಈ ವಿವಾದಕ್ಕೆ ತೆರೆ ಬೀಳಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ವರದಿ: ನವೀನ್ ಕುಮಾರ್
Hashtags:#ಹಾಸನಾಂಬೆ #HDRevanna #HassanNews #ಹಾಸನ #Hassanamba #ಜೆಡಿಎಸ್ #KarnatakaPolitics #HassanDC #KarunaaduTimes #KannadaNews
ಕರುನಾಡು ಟೈಮ್ಸ್ ವೆಬ್ಸೈಟ್ಗೆ ಭೇಟಿ ನೀಡಿ:
www.karunaadutimes.com