ರಾಯಚೂರು: ವ್ಯಾಪಾರದಲ್ಲಿ ಉಂಟಾದ ನಷ್ಟ ಹಾಗೂ ಸಾಲದ ಹೊರೆ ಒಂದಿಡೀ ಕುಟುಂಬದ ಬದುಕನ್ನೇ ದುರಂತದತ್ತ ತಳ್ಳಿರುವ ಆಘಾತಕಾರಿ ಘಟನೆ ರಾಯಚೂರಿನಲ್ಲಿ ನಡೆದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಬಳಿಕ ಕುಟುಂಬದ ಯಜಮಾನ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ರಾಯಚೂರಿನ ಜಲಾಲನಗರದ ರೈತ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ. ವಿಷ್ಣು ಮಹೇಶ್ (45), ಅವರ ಪತ್ನಿ ಅರುಣ (36), ಮಕ್ಕಳಾದ ಶ್ಲೋಕ (10) ಹಾಗೂ ಖುಷಿ (7) ಮೃತಪಟ್ಟವರು.
ವಿಷ್ಣು ಮಹೇಶ್ ಗಂಜ್ನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಹೈದರಾಬಾದ್ನಲ್ಲಿ ವ್ಯಾಪಾರವನ್ನೂ ನಡೆಸುತ್ತಿದ್ದರು. ಆದರೆ ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿಂದ ಆರ್ಥಿಕ ಸಂಕಷ್ಟ ಎದುರಾಗಿತ್ತು. ಸಾಲದ ಹೊರೆ ಹೆಚ್ಚಾಗಿದ್ದು, ಈ ವಿಚಾರವಾಗಿ ಅವರು ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, ರಾತ್ರಿ ತಂದಿದ್ದ ಬಿರಿಯಾನಿಯಲ್ಲಿ ಕ್ರಿಮಿನಾಶಕ ಬೆರೆಸಿ ನೀಡಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಸಾವಿನ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.
ಈ ದುರಂತದಲ್ಲಿ ಕುಟುಂಬದ ಹಿರಿಯ ಮಗ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾತ್ರಿ ತಂದಿದ್ದ ಬಿರಿಯಾನಿ ಸೇವಿಸದ ಕಾರಣ ಬಾಲಕ ಬದುಕುಳಿದಿದ್ದಾನೆ ಎನ್ನಲಾಗಿದೆ. ಬೆಳಗ್ಗೆ ಮನೆಯಲ್ಲಿ ತಾಯಿ, ತಮ್ಮ ಹಾಗೂ ತಂಗಿಯ ಮೃತದೇಹಗಳನ್ನು ಕಂಡ ಬಾಲಕ ಆಘಾತಕ್ಕೊಳಗಾಗಿದ್ದಾನೆ.
ಇನ್ನು ವಿಷ್ಣು ಮಹೇಶ್ ಅವರು ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡಿದ್ದಾಗ, ಸ್ನೇಹಿತರು ಧೈರ್ಯ ತುಂಬಿ ಬುದ್ಧಿವಾದ ಹೇಳಿದ್ದರು ಎಂದು ತಿಳಿದುಬಂದಿದೆ.
ಘಟನೆಗೂ ಮುನ್ನ ಮನೆಯಿಂದ ಹೊರಟಿದ್ದ ವಿಷ್ಣು, ಪರಿಚಯಸ್ಥರೊಬ್ಬರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ರೈಲ್ವೆ ಹಳಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ನಿ ಹಾಗೂ ಮಕ್ಕಳ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿರುವ ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸರ ತನಿಖೆಯಿಂದಲೇ ಸಾವಿನ ಹಿಂದಿನ ಸಂಪೂರ್ಣ ಸತ್ಯ ಹೊರಬರಬೇಕಿದೆ.
Tags:#Raichur #RaichurNews #ರಾಯಚೂರು #ಜಲಾಲನಗರ #FamilyTragedy #CrimeNews #KarnatakaNews #KarnatakaCrime #ವ್ಯಾಪಾರದಲ್ಲಿ_ನಷ್ಟ #ಸಾಲಬಾಧೆ #ಕರುನಾಡುಟೈಮ್ಸ್