ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ತನಿಖೆಯ ವೇಳೆ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಪೊಲೀಸರು ಪ್ರಸ್ತಾಪಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಪೊಲೀಸ್ ಆಯುಕ್ತರ ಹೇಳಿಕೆ ಪ್ರಕಾರ, ರಿತೇಶ್ ಪಾಂಡೆ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿಳಾಸದಲ್ಲಿದ್ದರು. ಪ್ರಜ್ವಲ್ ಪ್ರಸಾದ್ ಅವರ ಸೂಚನೆಯ ಮೇರೆಗೆ ವಿವಾದಿತ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ. ಅಲ್ಲದೆ, ರಿತೇಶ್ ಪಾಂಡೆ ಮತ್ತು ಪ್ರಜ್ವಲ್ ಪ್ರಸಾದ್ ಅವರಿಗೆ ಹಣ ವರ್ಗಾವಣೆಯಾಗಿರುವುದೂ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ ಎಕ್ಸ್ಚೇಂಜ್ ಬಗ್ಗೆಯೂ ತನಿಖೆ!
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ನೀಡಿದ ಆಯುಕ್ತರು, ಪ್ರಜ್ವಲ್ ಪ್ರಸಾದ್ ಅವರು ಕುಮಾರಸ್ವಾಮಿ ಅವರ ಅಧಿಕೃತ ನಿವಾಸದ ವಿಳಾಸವನ್ನು ನೀಡಿದ್ದರು. ಅಲ್ಲದೆ, ಕೇಂದ್ರ ಸಚಿವರ ನಿವಾಸದಲ್ಲಿಯೇ ಮೊಬೈಲ್ ಫೋನ್ ವಿನಿಮಯ ನಡೆದಿರುವ ವಿಚಾರವೂ ತನಿಖೆಯ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಪ್ರಕರಣದ ಪ್ರಮುಖ ವ್ಯಕ್ತಿಗಳಾದ ಪ್ರಜ್ವಲ್ ಪ್ರಸಾದ್ ಮತ್ತು ವಿನೋದ್ ಶರ್ಮಾ ಸದ್ಯ ನಾಪತ್ತೆಯಾಗಿದ್ದಾರೆ. ಪ್ರಜ್ವಲ್ ಪ್ರಸಾದ್ ಬಂಧನವಾದ ಬಳಿಕ ಪ್ರಕರಣದ ಕುರಿತು ಇನ್ನಷ್ಟು ಮಹತ್ವದ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಆರೋಪಿಗಳ ಬಂಧನದ ನಂತರ ಇತರ ವ್ಯಕ್ತಿಗಳ ಪಾತ್ರದ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ತನಿಖೆಯ ಮುಂದಿನ ಹಂತದತ್ತ ಎಲ್ಲರ ಗಮನ!
ಈ ಬೆಳವಣಿಗೆಯೊಂದಿಗೆ ಸ್ಟಿಂಗ್ ಆಪರೇಷನ್ ಪ್ರಕರಣ ಮತ್ತಷ್ಟು ಕುತೂಹಲ ಮೂಡಿಸಿದೆ. ಹಣ ವರ್ಗಾವಣೆ, ವಿಡಿಯೋ ಅಪ್ಲೋಡ್ ಮತ್ತು ಮೊಬೈಲ್ ವಿನಿಮಯದ ಸುತ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಳ ಬಂಧನದ ಬಳಿಕ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಬಹಿರಂಗವಾಗಲಿವೆಯೇ ಎಂಬುದು ಕುತೂಹಲ ಮೂಡಿಸಿದೆ.
ಆದರೆ, ಪ್ರಕರಣದಲ್ಲಿ ಪ್ರಸ್ತಾಪವಾಗಿರುವ ವ್ಯಕ್ತಿಗಳ ಪಾತ್ರ ಹಾಗೂ ಆರೋಪಗಳ ಸತ್ಯಾಸತ್ಯತೆ ತನಿಖೆಯ ಮುಂದಿನ ಬೆಳವಣಿಗೆಗಳಿಂದಲೇ ಸ್ಪಷ್ಟವಾಗಬೇಕಿದೆ.
ವರದಿ: ನವೀನ್ ಕುಮಾರ್
Tags:#StingOperation #HDKumaraswamy #Siddaramaiah #KarnatakaPolitics #BengaluruPolice #PrajwalPrasad #VinodSharma #PoliticalNews #KarnatakaNews #BengaluruNews #ಕರ್ನಾಟಕರಾಜಕೀಯ #ಕುಮಾರಸ್ವಾಮಿ #ಸಿದ್ದರಾಮಯ್ಯ #ಸ್ಟಿಂಗ್ಆಪರೇಷನ್ #ಬೆಂಗಳೂರುಸುದ್ದಿ #ಕರುನಾಡುಟೈಮ್ಸ್