ಬೀದರ್: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಎಟಿಎಂ ದರೋಡೆ ಪ್ರಕರಣವನ್ನು ಬೀದರ್ ಪೊಲೀಸರು ಕೇವಲ ಐದೇ ದಿನಗಳಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸುಳಿವುಗಳ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹೈದರಾಬಾದ್ನ ಶಾಹೀನ್ ನಗರದಲ್ಲಿ ನಾಲ್ವರು ಅಂತರ್ರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ನಾಲ್ವರಲ್ಲಿ ಮೂವರು ಹರಿಯಾಣ ಮೂಲದವರಾಗಿದ್ದು, ಮತ್ತೊಬ್ಬ ಆರೋಪಿ ರಾಜಸ್ಥಾನ ಮೂಲದವನು ಎಂದು ತಿಳಿದುಬಂದಿದೆ. ಆಸು ಎಂಡಿ ಶೋಹರಬ್ ಖಾನ್, ಆಸೀಪ್ ಚೇತರಖಾನ್, ಅನೀಷ್ ಇಂದ್ರಿಷ್ ಹಾಗೂ ರಾಹುಲ್ ಪಾಪುಖಾನ್ ಬಂಧಿತ ಆರೋಪಿಗಳು.
ಏನಿದು ಎಟಿಎಂ ದರೋಡೆ ಪ್ರಕರಣ?
ಅಕ್ಟೋಬರ್ 25ರಂದು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದ ಮಳಿಗೆಯಲ್ಲಿದ್ದ ಎಸ್ಬಿಐ ಎಟಿಎಂ ಅನ್ನು ಗುರಿಯಾಗಿಸಿಕೊಂಡಿದ್ದ ಖದೀಮರು, ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ಕತ್ತರಿಸಿದ್ದರು. ಬಳಿಕ ತಮ್ಮ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗದಂತೆ ಕ್ಯಾಮರಾಗಳಿಗೆ ಸ್ಪ್ರೇ ಸಿಂಪಡಿಸಿ, ಎಟಿಎಂನಲ್ಲಿದ್ದ 23 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಲಭ್ಯವಾದ ಸುಳಿವುಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳ ಬೆನ್ನುಹತ್ತಿ ಹೈದರಾಬಾದ್ನ ಶಾಹೀನ್ ನಗರದಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
₹32 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ!
ಬಂಧಿತ ಆರೋಪಿಗಳಿಂದ ಸುಮಾರು 12 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಮಾಸ್ಕ್, ಮೊಬೈಲ್ ಫೋನ್ಗಳು, ಗ್ಲೌಸ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟರ್ ಹಾಗೂ ಕಾರು ಸೇರಿದಂತೆ ಒಟ್ಟು ಸುಮಾರು 32 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಎಸ್ಪಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ಭಾಲ್ಕಿ ಪೊಲೀಸರು ನಡೆಸಿದ ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಪ್ರಕರಣದ ಆರೋಪಿಗಳನ್ನು ಐದೇ ದಿನಗಳಲ್ಲಿ ಬಂಧಿಸಿರುವುದು ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಈ ಸಂಬಂಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವರದಿ: ನವೀನ್ ಕುಮಾರ್
Tags:#Bidar #BidarPolice #Bhalki #ATMRobbery #SBIBank #ATMTheft #CrimeNews #Hyderabad #Haryana #Rajasthan #KarnatakaPolice #ಬೀದರ್ #ಭಾಲ್ಕಿ #ಎಟಿಎಂದರೋಡೆ #ಬೀದರ್ಪೊಲೀಸರು #ಕರ್ನಾಟಕಸುದ್ದಿ #ಕ್ರೈಂನ್ಯೂಸ್ #ಕರುನಾಡುಟೈಮ್ಸ್
ವೆಬ್ಸೈಟ್ಗೆ ಭೇಟಿ ನೀಡಿ:
🌐 www.karunaadutimes.com
ಕರುನಾಡು ಟೈಮ್ಸ್ – ನಿಮ್ಮ ನಾಡಿನ ನೈಜ ಸುದ್ದಿಗಳ ಧ್ವನಿ.