ಕಲಬುರಗಿ: ಬೀದಿ ನಾಯಿಗಳ ದಾಳಿಯಿಂದ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಮನೆಯ ಸಮೀಪ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ನಗರದ ದರಿಯಾಪುರ ಕೋಟನೂರ್ ಬಡಾವಣೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪ ಪೂಜಾರಿ ಅವರ ಪುತ್ರ ಮನೋಜ್ ಪೂಜಾರಿ (4) ಎಂದು ಗುರುತಿಸಲಾಗಿದೆ.
ಆಟವಾಡುತ್ತಿದ್ದ ಮಗುವಿನ ಮೇಲೆ ಏಕಾಏಕಿ ದಾಳಿ!
ಶರಣಬಸಪ್ಪ ಪೂಜಾರಿ ಅವರು ಕೆಲಸದ ನಿಮಿತ್ತ ಕಲಬುರಗಿಯಲ್ಲಿ ವಾಸವಾಗಿದ್ದು, ವಾಚ್ಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಮನೋಜ್ ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಯೊಂದು ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ನಾಯಿಯ ದಾಳಿಯಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತಾದರೂ, ವೈದ್ಯರ ಪ್ರಯತ್ನ ಫಲಿಸದೆ ಮನೋಜ್ ಕೊನೆಯುಸಿರೆಳೆದಿದ್ದಾನೆ.
ಮತ್ತೆ ಮುನ್ನೆಲೆಗೆ ಬಂದ ಬೀದಿ ನಾಯಿಗಳ ಸಮಸ್ಯೆ!
ನಾಲ್ಕು ವರ್ಷದ ಪುಟ್ಟ ಕಂದನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಸಾವಿನ ಸುದ್ದಿ ಸ್ಥಳೀಯರಲ್ಲಿ ಆತಂಕ ಹಾಗೂ ನೋವು ಮೂಡಿಸಿದೆ.
ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸ್ಥಳೀಯ, ರಾಜ್ಯ ಹಾಗೂ ದೇಶದ ಪ್ರಮುಖ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.
👉 https://www.karunaadutimes.com
ಕರುನಾಡು ಟೈಮ್ಸ್ – ಜನರ ಧ್ವನಿ, ನಾಡಿನ ಸುದ್ದಿ.
Tags:#Kalaburagi #StrayDogAttack #KalaburagiNews #DogAttack #ManojPujari #KarnatakaNews #BreakingNews #ಬೀದಿನಾಯಿ #ನಾಯಿದಾಳಿ #ಕಲಬುರಗಿ #ಕಲಬುರಗಿಸುದ್ದಿ #ಬಾಲಕಸಾವು #ಕರ್ನಾಟಕಸುದ್ದಿ #KarunaaduTimes