ಬೆಂಗಳೂರು: ರಾಜ್ಯಾದ್ಯಂತ ಗಮನ ಸೆಳೆದಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆ ಮುಂದುವರಿದಿದ್ದು, ಆರೋಪಿಗಳಿಗೆ ಸಂಬಂಧಿಸಿದ ಜಾಮೀನು ಅರ್ಜಿಗಳು ಹಾಗೂ ಇತರೆ ಕಾನೂನು ಅರ್ಜಿಗಳ ವಿಚಾರಣೆ ಕೂಡ ನಡೆಯುತ್ತಿದೆ. ಈ ನಡುವೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರದೋಶ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ತಂದೆಯ ಕಾರ್ಯವನ್ನು ನೆರವೇರಿಸಬೇಕಿರುವ ಹಿನ್ನೆಲೆಯಲ್ಲಿ ಮೂರು ವಾರಗಳ ಕಾಲ ಜಾಮೀನು ನೀಡುವಂತೆ ಪ್ರದೋಶ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಅವರ ಈ ಮನವಿಗೆ ನ್ಯಾಯಾಲಯದಿಂದ ಅನುಮತಿ ದೊರೆತಿಲ್ಲ. ಹೀಗಾಗಿ ಜಾಮೀನಿನ ನಿರೀಕ್ಷೆಯಲ್ಲಿದ್ದ ಪ್ರದೋಶ್ಗೆ ಹಿನ್ನಡೆಯಾಗಿದೆ.
ಸಾಕ್ಷಿಗಳ ವಿಚಾರಣೆಗೆ ಹೊಸ ತಿರುವು!
ಇನ್ನೊಂದೆಡೆ, ಅಕ್ಟೋಬರ್ 27ರಂದು ಪ್ರಕರಣದ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಾದ ಕಿರಣ್ ಮತ್ತು ಪುನೀತ್ ಅವರ ವಿಚಾರಣೆ ನಡೆಯಬೇಕಿತ್ತು. ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರು ಸಾಕ್ಷಿಗಳ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಪುನೀತ್ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣೆಗೆ ಅಡ್ಡಿಯಾಗಿದೆ.
ಈ ಹಿಂದೆ ಪುನೀತ್ ಅವರು ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದರು. ಇದೀಗ ನ್ಯಾಯಾಲಯದ ವಿಚಾರಣೆ ವೇಳೆ ಅವರ ಹೇಳಿಕೆಯನ್ನು ದಾಖಲಿಸುವ ಪ್ರಕ್ರಿಯೆ ನಡೆಯಬೇಕಿತ್ತು.
ಪುನೀತ್ ವಿರುದ್ಧ ಸಮನ್ಸ್, ಬಂಧನ ವಾರಂಟ್!
ಪುನೀತ್ ಅವರು 'ಡಿ ಕಂಪನಿ' ಅಭಿಮಾನಿ ಪುಟದ ಅಡ್ಮಿನ್ ಆಗಿದ್ದರು ಎನ್ನಲಾಗಿದ್ದು, ದರ್ಶನ್ಗೆ ಆಪ್ತರಾಗಿದ್ದರು ಎಂಬ ಮಾಹಿತಿಯೂ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇವರನ್ನು ಈ ಹಿಂದೆ ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ಆದರೆ ಇದೀಗ ಸಾಕ್ಷಿ ವಿಚಾರಣೆಗೆ ಗೈರಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಪುನೀತ್ ವಿರುದ್ಧ ಸಮನ್ಸ್ ಜಾರಿಗೊಳಿಸಿದ್ದು, ಬಂಧನ ವಾರಂಟ್ ಕೂಡ ಹೊರಡಿಸಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಒಂದೆಡೆ ಮುಂದುವರಿದಿದ್ದರೆ, ಮತ್ತೊಂದೆಡೆ ಆರೋಪಿಗಳ ಜಾಮೀನು ಅರ್ಜಿ ಮತ್ತು ಸಾಕ್ಷಿಗಳ ವಿಚಾರಣೆಗೆ ಸಂಬಂಧಿಸಿದ ಬೆಳವಣಿಗೆಗಳು ಪ್ರಕರಣದ ಕುತೂಹಲವನ್ನು ಹೆಚ್ಚಿಸಿವೆ. ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದೆ ಯಾವ ಬೆಳವಣಿಗೆಗಳು ನಡೆಯಲಿವೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.
ವರದಿ: ನವೀನ್ ಕುಮಾರ್
Hashtags:#RenukaswamyCase #Pradosh #Darshan #Puneet #KannadaNews #BengaluruNews #CourtNews #RenukaswamyMurderCase #BreakingNews #CrimeNews #KarnatakaNews #KarunaaduTimes