ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಅಕ್ರಮ ಜಾಲದ ವಿರುದ್ಧ ನಗರ ಪೊಲೀಸರು ಕೈಗೊಂಡಿರುವ ವ್ಯಾಪಕ ಕಾರ್ಯಾಚರಣೆಯಲ್ಲಿ 23 ಮಂದಿ ಆರೋಪಿಗಳನ್ನು ಬಂಧಿಸಿ, ಸುಮಾರು ₹8 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಪೊಲೀಸ್ ಠಾಣೆಗಳು ಹಾಗೂ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಸಂಯುಕ್ತ ಕಾರ್ಯಾಚರಣೆಯಲ್ಲಿ ಈ ಯಶಸ್ಸು ದೊರೆತಿದೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತರಲ್ಲಿ ದೇಶೀಯ ಹಾಗೂ ವಿದೇಶಿ ಪ್ರಜೆಗಳೂ ಸೇರಿದ್ದು, ಮಾದಕ ವಸ್ತುಗಳ ಸಾಗಾಟ, ಸಂಗ್ರಹಣೆ ಮತ್ತು ಮಾರಾಟ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಾರ್ಯಾಚರಣೆಯಲ್ಲಿ ಹೈಡ್ರೋ ಗಾಂಜಾ, ಕೊಕೇನ್, ಮೆಥಾಂಫೆಟಮೈನ್ ಸೇರಿದಂತೆ ವಿವಿಧ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಖ್ಯಾತ ಪೆಡ್ಲರ್ ಬಂಧನ
ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಲಾಸಿಪಾಳ್ಯದ ನಿವಾಸಿ ಇಮ್ರಾನ್ ಪಾಶಾ ಅಲಿಯಾಸ್ "ಚೀಲಾ ಇಮ್ರಾನ್" ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಬಳಿಯಿಂದ ಸುಮಾರು ₹2.20 ಕೋಟಿ ಮೌಲ್ಯದ 3.18 ಕೆ.ಜಿ. ಹೈಡ್ರೋ ಗಾಂಜಾ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಮುಂಬೈ ಮೂಲದ ಡ್ರಗ್ಸ್ ಜಾಲದ ಸಂಪರ್ಕ ಹೊಂದಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗಾಂಡಾ ಮಹಿಳೆ ಹಾಗೂ ನೈಜೀರಿಯಾ ಪ್ರಜೆ ಸೆರೆ
ಸಿಸಿಬಿ ಮಾದಕ ವಸ್ತು ನಿಗ್ರಹ ದಳ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಉಗಾಂಡಾ ಮೂಲದ ಮಹಿಳೆ ಜೆನೆಟ್ ಹಾಗೂ ನೈಜೀರಿಯಾ ಪ್ರಜೆ ವಹಾಬ್ ಎಲ್ವಿಸ್ ಯೂಸೂಫ್ ಅವರನ್ನು ಬಂಧಿಸಲಾಗಿದೆ.
ಇವರಿಂದ ಸುಮಾರು ₹1.40 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಜೆನೆಟ್ ವ್ಯವಹಾರ ವೀಸಾದ ಮೂಲಕ ಭಾರತಕ್ಕೆ ಬಂದು ಬಳಿಕ ಮಾದಕ ವಸ್ತು ಸಾಗಾಟ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಮಾಹಿತಿ ಬಹಿರಂಗವಾಗಿದೆ.
ನಿಷೇಧಿತ ಇ-ಸಿಗರೇಟ್ ಮಾರಾಟ ಜಾಲದ ಮೇಲೆ ದಾಳಿ
ಭೀಮಾನಗರ ಠಾಣೆ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿಷೇಧಿತ ಇ-ಸಿಗರೇಟ್ ಹಾಗೂ ವಿದೇಶಿ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ 1,197 ಇ-ಸಿಗರೇಟ್ಗಳು, 490 ವಿದೇಶಿ ಸಿಗರೇಟ್ ಪ್ಯಾಕ್ಗಳು ಹಾಗೂ 120 ಹುಕ್ಕಾ ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಜಪ್ತಿಯಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹1.36 ಕೋಟಿ ಎಂದು ಅಂದಾಜಿಸಲಾಗಿದೆ.
ವಿವಿಧ ಠಾಣೆಗಳ ಕಾರ್ಯಾಚರಣೆಯಲ್ಲಿ ಮತ್ತಷ್ಟು ಜಪ್ತಿ
ಇಂದಿರಾನಗರ, ಹಲಸೂರು, ಹೆಣ್ಣೂರು, ಕೆ.ಜಿ.ಹಳ್ಳಿ ಹಾಗೂ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಪ್ರತ್ಯೇಕ ಕಾರ್ಯಾಚರಣೆಗಳು ನಡೆದಿವೆ. ಈ ವೇಳೆ ಹೈಡ್ರೋ ಗಾಂಜಾ, ಗಾಂಜಾ, ಕೊಕೇನ್ ಹಾಗೂ ಮೆಥಾಂಫೆಟಮೈನ್ ಸೇರಿದಂತೆ ಹಲವು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದ್ದು, ಮಾದಕ ವಸ್ತು ಪೂರೈಕೆ ಜಾಲದ ಹಿಂದಿರುವ ಪ್ರಮುಖ ವ್ಯಕ್ತಿಗಳನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಕಾರ್ಯಾಚರಣೆ ಮುಂದುವರಿಯಲಿದೆ
ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ತಡೆಯುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಸಣ್ಣ ಸುಳಿವಿನಿಂದ ಆರಂಭಿಸಿ ದೊಡ್ಡ ಜಾಲಗಳನ್ನು ಭೇದಿಸುವ ಕೆಲಸ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿಯೂ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅಧಿಕಾರಿಗಳು ಸ್ಪppಷ್ಟಪಡಿಸಿದ್ದಾರೆ.