ಮೈಸೂರು: ಕನ್ನಡ ಕಿರುತೆರೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ನಟಿ ಸ್ಪಂದನಾ ಸೋಮಣ್ಣ ಅವರು ಬಿಗ್ಬಾಸ್ ಕನ್ನಡ ಸೀಸನ್ 12ರ ನೆನಪುಗಳನ್ನು ಮತ್ತೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದು ಐದು ತಿಂಗಳು ಪೂರೈಸಿದ ಸಂದರ್ಭದಲ್ಲಿ, ಕುಟುಂಬ ಸದಸ್ಯರು ನೀಡಿದ್ದ ಪ್ರೀತಿಯ ಸ್ವಾಗತದ ಅಪರೂಪದ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಜನವರಿ 13ರಂದು ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಪಂದನಾ ಅವರಿಗೆ ಮೈಸೂರಿನ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಹೃದಯಪೂರ್ವಕ ಸ್ವಾಗತ ಕೋರಿದ್ದರು. ಅಜ್ಜ-ಅಜ್ಜಿ, ತಂದೆ-ತಾಯಿ ಸೇರಿದಂತೆ ಕುಟುಂಬದ ಸದಸ್ಯರ ಪ್ರೀತಿ ಮತ್ತು ಅಭಿಮಾನ ಆ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಿತ್ತು.
ಆ ನೆನಪುಗಳನ್ನು ಮತ್ತೆ ಮೆಲುಕು ಹಾಕಿರುವ ಸ್ಪಂದನಾ, “ಆ ದಿನ ಮತ್ತು ನನ್ನ ಪುಟ್ಟ ಜೀವನವನ್ನು ತುಂಬಾ ಪ್ರೀತಿಸುತ್ತೇನೆ” ಎಂಬ ಭಾವನಾತ್ಮಕ ಬರಹದೊಂದಿಗೆ ಆ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್ಗೆ ಅಭಿಮಾನಿಗಳಿಂದ ಮೆಚ್ಚುಗೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಮೂಲತಃ ಮೈಸೂರಿನವರಾದ ಸ್ಪಂದನಾ ಸೋಮಣ್ಣ ಅವರು ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದು, ಬಳಿಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಕನ್ನಡದ ಹಲವು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ‘ನಾನು ನನ್ನ ಕನಸು’, ‘ಗೃಹಪ್ರವೇಶ’, ‘ಕರಿಮಣಿ’ ಸೇರಿದಂತೆ ತೆಲುಗಿನ ಧಾರಾವಾಹಿ ‘ಅಭಿಲಾಷಾ’ದಲ್ಲೂ ಅವರು ನಟಿಸಿದ್ದಾರೆ. ಅಲ್ಲದೆ ‘ದಿಲ್ಖುಷ್’, ‘ಮರೀಚಿ’ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
‘ಬಾಯ್ಸ್ ವರ್ಸಸ್ ಗರ್ಲ್ಸ್’ ಹಾಗೂ ‘ಬಿಗ್ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮಗಳ ಮೂಲಕ ಅವರು ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ. ಈಗ ಐದು ತಿಂಗಳ ಬಳಿಕ ಹಂಚಿಕೊಂಡಿರುವ ಈ ನೆನಪುಗಳು ಅಭಿಮಾನಿಗಳ ಮನಸ್ಸಿಗೆ ಮತ್ತೆ ಬಿಗ್ಬಾಸ್ ದಿನಗಳನ್ನು ನೆನಪಿಸಿವೆ.
Tags: mm#ಸ್ಪಂದನಾ_ಸೋಮಣ್ಣ#SpandanaSomanna
#BiggBossKannadaSeason12#ಬಿಗ್ಬಾಸ್ಕನ್ನಡ#ಮೈಸೂರು#ಕನ್ನಡನಟಿ#ಕನ್ನಡಧಾರಾವಾಹಿ#ಕನ್ನಡಸಿನಿಮಾ#ಸೆಲೆಬ್ರಿಟಿನ್ಯೂಸ್#ಮನರಂಜನೆ#KannadaEntertainment#CelebrityNews#Mysuru