ಕಾರವಾರ: ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ಮಸೀದಿ ಹಾಗೂ ಮದರಸಾ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಭಟ್ಕಳ ತಾಲೂಕಿನ ತಲಾಂದದಲ್ಲಿ ಬುಧವಾರ ರಾತ್ರಿ ನಡೆದಿದೆ. ಘಟನೆ ಬಳಿಕ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆ ತಲಾಂದದಿಂದ ಆರಂಭಗೊಂಡು ಗುಳ್ಳೆ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ಸ್ಟೇಷನ್ ರಸ್ತೆಯ ಮೂಲಕ ಸಾಗುತ್ತಿತ್ತು. ಈ ವೇಳೆ ಮಾರ್ಗದಲ್ಲಿರುವ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ತಾಜುಸುನ್ನಾ ಅರೇಬಿಕ್ ಮದರಸಾ ಕಟ್ಟಡಗಳತ್ತ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಲ್ಲು ತೂರಾಟದಿಂದ ಮಸೀದಿ ಹಾಗೂ ಮದರಸಾದ ಕೆಲವು ಕಿಟಕಿ ಗಾಜುಗಳು ಒಡೆದು ಹಾನಿಯಾಗಿವೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಪ್ರಯತ್ನ ನಡೆದಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಸುದ್ದಿ ಹರಡುತ್ತಿದ್ದಂತೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಭಟ್ಕಳ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ, ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂಬಂಧ ಬಂದರು ರಸ್ತೆ ನಿವಾಸಿಗಳಾದ ಅಬ್ದುಲ್ ಅಲಿಂ ಹಾಗೂ ಶಾಹುಲ್ ಅಮೀನ್ ಗವಾಯಿ ನೀಡಿದ ದೂರಿನ ಆಧಾರದ ಮೇಲೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲು ತೂರಾಟ ನಡೆಸಿದವರು ಯಾರು ಹಾಗೂ ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಭಟ್ಕಳ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ ಹಾಗೂ ಎಎಸ್ಪಿ ರಾನು ಗುಪ್ತ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಿಪಿಐ ದಿವಾಕರ ಪಿ.ಎಂ. ಹಾಗೂ ಪಿಎಸ್ಐ ನವೀನ ನಾಯ್ಕ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಸೂಚಿಸಿದ್ದಾರೆ.
ವರದಿ: ನವೀನ್ ಕುಮಾರ್
🌐 ಇನ್ನಷ್ಟು ಸ್ಥಳೀಯ ಹಾಗೂ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ:
www.karunaadutimes.com