ಮಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಬಾವಿಗೆ ಎಸೆದಿರುವ ಆರೋಪ ಕೇಳಿಬಂದಿದ್ದು, ಘಟನೆಯಲ್ಲಿ 3 ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆ ಗ್ರಾಮದಲ್ಲಿ ನಡೆದಿದೆ.
ಪೆರ್ನೆ ಗ್ರಾಮದ ನೂರುನ್ನೀಸಾ (28) ಹಾಗೂ ಅವರ ಪತಿ ಸಿನಾನ್ (32) ನಡುವೆ ಫೋನ್ನಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋಪಗೊಂಡ ನೂರುನ್ನೀಸಾ, ಪತಿಯ ತಂಗಿಯ ಮಗುವಿನ ಜೊತೆಗೆ ತನ್ನ ಸ್ವಂತ ಮಗುವನ್ನೂ ಬಾವಿಗೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ತಕ್ಷಣ ಕಾರ್ಯಾಚರಣೆ ನಡೆಸಿ ಎರಡೂ ಮಕ್ಕಳನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಆದರೆ, ಪತಿಯ ತಂಗಿಯ ಮಗು ಮೃತಪಟ್ಟಿರುವುದು ಸ್ಥಳದಲ್ಲೇ ದೃಢಪಟ್ಟಿದೆ.
ಇನ್ನು ನೂರುನ್ನೀಸಾಳ ಸುಮಾರು ಮೂರೂವರೆ ವರ್ಷದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಉಪ್ಪಿನಂಗಡಿ ಪೊಲೀಸರು ನೂರುನ್ನೀಸಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ, ಘಟನೆ ನಡೆದ ನಿಖರ ಕಾರಣ ಹಾಗೂ ಇತರೆ ವಿವರಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಂದು ಕ್ಷಣದ ಕೋಪ… ಎರಡು ಕಂದಮ್ಮಗಳ ಬದುಕನ್ನೇ ಕತ್ತಲೆಯಾಗಿಸಿದ ದುರಂತ. ಘಟನೆಯ ಸಂಪೂರ್ಣ ಹಿನ್ನೆಲೆ ಪೊಲೀಸ್ ತನಿಖೆಯಿಂದ ಇನ್ನಷ್ಟು ಸ್ಪಷ್ಟವಾಗಬೇಕಿದೆ.
ವರದಿ: ನವೀನ್ ಕುಮಾರ್
📲 ಇಂತಹ ಸ್ಥಳೀಯ ಹಾಗೂ ತಾಜಾ ಸುದ್ದಿಗಳಿಗಾಗಿ www.karunaadutimes.com ಗೆ ಭೇಟಿ ನೀಡಿ.
📍Tags:#ಮಂಗಳೂರು #ಉಪ್ಪಿನಂಗಡಿ #ಪೆರ್ನೆ #ದಕ್ಷಿಣಕನ್ನಡ #ಕೌಟುಂಬಿಕಕಲಹ #ಮಕ್ಕಳುದುರಂತ #ಮಗುವಿನಸಾವು #ಪೊಲೀಸ್ #ಉಪ್ಪಿನಂಗಡಿಪೊಲೀಸ್ #ಕರ್ನಾಟಕಸುದ್ದಿ #ಮಂಗಳೂರుసುದ್ದಿ #ದಕ್ಷಿಣಕನ್ನಡಸುದ್ದಿ #BreakingNews #KarnatakaNews #KarunaaduTimes