ಚಿಕ್ಕಮಗಳೂರು: ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆಯಾಡಿ, ಅದರ ಮಾಂಸವನ್ನು ಕತ್ತರಿಸುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಲಕ್ಕವಳ್ಳಿ ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತರನ್ನು ಎಂ.ಸಿ.ಹಳ್ಳಿಯ ಕಿರಣ್, ಗೋವಿಂದರಾಜು ಹಾಗೂ ಭದ್ರಾವತಿಯ ಮಣಿಕಂಠ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
🔴 ಸುಮಾರು 70 ಕೆಜಿ ಮಾಂಸ ವಶ
ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ತಲೆ ಮತ್ತು ಕಾಲುಗಳ ಸಮೇತ ಸುಮಾರು 70 ಕೆಜಿ ಕಡವೆ ಮಾಂಸ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ.
ಇದರ ಜೊತೆಗೆ ಬೇಟೆಗೆ ಬಳಸಲಾಗಿದೆ ಎನ್ನಲಾದ ಒಂದು ನಾಡ ಬಂದೂಕು, ದ್ವಿಚಕ್ರ ವಾಹನ, ಕತ್ತಿ, ಚಾಕು, ಚೂರಿ ಹಾಗೂ ಹೆಡ್ಲೈಟ್ ಸೇರಿದಂತೆ ಹಲವು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಎಂ.ಸಿ.ಹಳ್ಳಿ ಕ್ವಾಟ್ರಸ್ನ ಪ್ರವೀಣ್, ಪ್ರಭು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.
🌳 ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾರ್ಯಾಚರಣೆ
ಖಚಿತ ಮಾಹಿತಿ ಆಧರಿಸಿ ನಡೆದ ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ವಲಯದ ವಲಯ ಅರಣ್ಯಾಧಿಕಾರಿ ಇಂದು ಜಿ.ಎಸ್. ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಾಚರಣೆಯಲ್ಲಿ ಎಂ.ಸಿ.ಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಚನ್ನೇಗೌಡ ಜಿ.ಟಿ., ಲಕ್ಕವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕೆ.ಎಸ್., ಎಂ.ಸಿ.ಹಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕ ಸಂತೋಷ್ ಎಂ.ಬಿ., ಲಕ್ಕವಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕರಾದ ಬಾಲರಾಜ್, ಪುನೀತ್, ವಿಶ್ವನಾಥ್ ಹಾಗೂ ಅರಣ್ಯ ವೀಕ್ಷಕಿ ಕುಮಾರಿ ಶೋಭಾ ಸೇರಿದಂತೆ ಲಕ್ಕವಳ್ಳಿ ವಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.
🦌 ವನ್ಯಜೀವಿಗಳ ಸಂರಕ್ಷಣೆಗೆ ಕಾನೂನುಬಾಹಿರ ಬೇಟೆ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದಾಗಿ ಅಧಿಕಾರಿಗಳ ಕಾರ್ಯಾಚರಣೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
📍 ಚಿಕ್ಕಮಗಳೂರು | ಲಕ್ಕವಳ್ಳಿ | ಎಂ.ಸಿ.ಹಳ್ಳಿ
ವರದಿ: ನವೀನ್ ಕುಮಾರ್
🌐 ಹೆಚ್ಚಿನ ಸ್ಥಳೀಯ ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadutimes.ಕಂ
Tags:#ಕರ್ನಾಟಕ #ಚಿಕ್ಕಮಗಳೂರು #ಲಕ್ಕವಳ್ಳಿ #ಎಂಸಿಹಳ್ಳಿ #ಕಡವೆ #ವನ್ಯಜೀವಿ #ವನ್ಯಜೀವಿಸಂರಕ್ಷಣೆ #ಕಡವೆಬೇಟೆ #ಅರಣ್ಯಇಲಾಖೆ #ಅರಣ್ಯಾಧಿಕಾರಿಗಳು #ಬೇಟೆ #ಅಕ್ರಮಬೇಟೆ #ಚಿಕ್ಕಮಗಳೂರುಸುದ್ದಿ #ಕರ್ನಾಟಕಸುದ್ದಿ #KarunaaDuTimes #LocalNews #WildlifeProtection #Chikkamagaluru