ಹುಬ್ಬಳ್ಳಿ: ನಗರದ ಹೊರವಲಯದ ಎರಡು ಗ್ರಾಮಗಳಲ್ಲಿ ದುಷ್ಕರ್ಮಿಗಳು ಒಂದೇ ರಾತ್ರಿ ಎರಡು ಎಟಿಎಂಗಳಿಗೆ ಕನ್ನ ಹಾಕಿ ಬರೋಬ್ಬರಿ 14 ಲಕ್ಷ ರೂ. ಹಣ ದೋಚಿರುವ ಘಟನೆ ನಡೆದಿದೆ. ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮಗಳಲ್ಲಿ ಈ ಕಳ್ಳತನ ನಡೆದಿದ್ದು, ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಕಳ್ಳರು ಎಟಿಎಂ ಕೇಂದ್ರಗಳ ಶೆಟರ್ಗಳ ಲಾಕ್ಗಳನ್ನು ಮುರಿದು ಒಳನುಗ್ಗಿದ್ದಾರೆ. ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರಗಳನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ.
ಕಳ್ಳತನದ ವೇಳೆ ತಮ್ಮ ಗುರುತು ಪತ್ತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ದುಷ್ಕರ್ಮಿಗಳು ಸಿಸಿ ಕ್ಯಾಮೆರಾಗಳನ್ನೂ ಧ್ವಂಸಗೊಳಿಸಿದ್ದಾರೆ. ಜನ ಸಂಚಾರವಿರುವ ಗ್ರಾಮದ ನಡು ರಸ್ತೆಯಲ್ಲೇ ಎಟಿಎಂ ಕೇಂದ್ರಗಳಿದ್ದರೂ, ಕಳ್ಳರು ಯಾವುದೇ ಭಯವಿಲ್ಲದೆ ಕೃತ್ಯ ಎಸಗಿರುವುದು ಗಮನ ಸೆಳೆದಿದೆ.
💰 ಎಲ್ಲಿಂದ ಎಷ್ಟು ಹಣ ಕಳವು?
🔹 ಸುಳ್ಳ ಗ್ರಾಮದ ಎಟಿಎಂ: ₹11 ಲಕ್ಷ
🔹 ಬ್ಯಾಹಟ್ಟಿ ಗ್ರಾಮದ ಎಟಿಎಂ: ₹3 ಲಕ್ಷ
🔹 ಒಟ್ಟು ಕಳವು: ₹14 ಲಕ್ಷ
ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ವಿನೋದ್ ಮುಕ್ತೆದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ತನಿಖೆ ಚುರುಕುಗೊಂಡಿದೆ.
ಸಿಸಿ ಕ್ಯಾಮೆರಾಗಳಿಗೆ ಹಾನಿ ಮಾಡಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಇತರೆ ತಾಂತ್ರಿಕ ಸಾಕ್ಷ್ಯಗಳು ಹಾಗೂ ಘಟನಾ ಸ್ಥಳದ ಸುಳಿವುಗಳನ್ನು ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಒಂದೇ ರಾತ್ರಿ ಎರಡು ಎಟಿಎಂಗಳಿಗೆ ಕನ್ನ ಹಾಕಿರುವ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ: ನವೀನ್ ಕುಮಾರ್
🌐 ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕರ್ನಾಟಕದ ಕ್ಷಣಕ್ಷಣದ ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadutimes.ಕಂ
Tags:#Hubballi #HubballiNews #ATMTheft #ATMRobbery #CrimeNews #KarnatakaCrime #HubballiCrime #Dharwad #KarnatakaNews #KannadaNews #Byahatti #Sulla #ATMದೋಚಾಟ #ಎಟಿಎಂ_ಕಳ್ಳತನ #ಕರ್ನಾಟಕ_ಸುದ್ದಿ #KarunaaduTimes