ಶಿವಮೊಗ್ಗ: ಅಡಿಕೆ ಬೇಯಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿಸಿ ಹಂಡೆಯೊಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೃತರನ್ನು ಶಿವಮೊಗ್ಗ ನಗರದ ವಡ್ಡಿನಕೊಪ್ಪದ ನಿವಾಸಿ ಜೇನು ಕುಮಾರ್ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 8ರಂದು ಜೇನು ಕುಮಾರ್ ಅವರು ತಮ್ಮ ಮನೆಯ ಸಮೀಪದ ಶೆಡ್ನಲ್ಲಿ ಅಡಿಕೆ ಬೇಯಿಸುವ ಕೆಲಸದಲ್ಲಿ ತೊಡಗಿದ್ದರು. ಅಡಿಕೆ ಹೊರತೆಗೆದ ಬಳಿಕ ಹಂಡೆಯಲ್ಲಿದ್ದ ಅಡಿಕೆ ಚೊಗರು ತೆಗೆಯಲು ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಏರಿದ್ದರು ಎನ್ನಲಾಗಿದೆ.
ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಅವರು ಹಂಡೆಯೊಳಗೆ ಬಿದ್ದಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರನ್ನು ಮಣಿಪಾಲದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಮುಂದುವರಿದಿದ್ದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಜೇನು ಕುಮಾರ್ ಮೃತಪಟ್ಟಿದ್ದಾರೆ.
ಘಟನೆಯ ಸಂಪೂರ್ಣ ದೃಶ್ಯ ಶೆಡ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ತೀವ್ರತೆಯನ್ನು ದೃಶ್ಯಗಳು ದಾಖಲಿಸಿವೆ.
ಅಡಿಕೆ ಬೇಯಿಸುವ ವೇಳೆ ನಡೆದ ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಬೇಸರ ಮೂಡಿಸಿದೆ.
ವರದಿ: ನವೀನ್ ಕುಮಾರ್
www.karunaadutimes.com