ತುಮಕೂರು: ಪಾವಗಡ ತಾಲೂಕಿನ ಕನಕಲಬಂಡೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದನೆಂಬ ಆರೋಪ ಎದುರಿಸುತ್ತಿದ್ದ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ ವೆಂಕಟೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದಾನೆ ಎನ್ನಲಾಗಿದ್ದ ವೆಂಕಟೇಶ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಕಾರ, ರಾತ್ರಿ ಸುಮಾರು 11 ಗಂಟೆ ವೇಳೆಗೆ ಬೆಟ್ಟದ ಪ್ರದೇಶದಲ್ಲಿ ವೆಂಕಟೇಶ್ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಆತನನ್ನು ಬಂಧಿಸಿದೆ. ಬಂಧನದ ವೇಳೆ ಆತ ಅರೆಬೆತ್ತಲೆಯ ಸ್ಥಿತಿಯಲ್ಲಿದ್ದು, ಮದ್ಯ ಸೇವಿಸುತ್ತಿದ್ದ ಹಾಗೂ ಚಿಕನ್ ಸೇವಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
💥 ನಾಡಬಾಂಬ್ ಪ್ರಕರಣದಲ್ಲೂ ಹೆಸರು?
ಆಗಸ್ಟ್ 29ರಂದು ರೈತ ಕರಿಯಣ್ಣ ಅವರ ಪಂಪ್ಸೆಟ್ ಬಳಿ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ವೆಂಕಟೇಶ್ ಹೆಸರು ಕೇಳಿಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ನಿಖರ ಹಿನ್ನೆಲೆ ಹಾಗೂ ಆತನ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ.
ಇದರ ಜೊತೆಗೆ, ಇತ್ತೀಚೆಗೆ ಗಂಗಸಾಗರ ಗ್ರಾಮದ ರೈತನಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಪತ್ರ ಅಂಟಿಸಿದ ಪ್ರಕರಣದಲ್ಲೂ ವೆಂಕಟೇಶ್ ಕೈವಾಡವಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು.
ಈ ಎಲ್ಲಾ ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಬೆದರಿಕೆ ಪ್ರಕರಣಗಳ ಹಿಂದಿನ ಕಾರಣ, ಬಳಸಿಕೊಂಡಿದ್ದ ವಿಧಾನ ಹಾಗೂ ಇತರರ ಸಂಪರ್ಕದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
👮 ಪೊಲೀಸ್ ತಂಡದಿಂದ ಕಾರ್ಯಾಚರಣೆ
ಅಡಿಷನಲ್ ಎಸ್ಪಿ ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಇನ್ಸ್ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್ಪೆಕ್ಟರ್ ಕೊಟ್ರೇಶ್, ಎಸ್ಐ ಸುನಿಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ವೆಂಕಟೇಶ್ ಬಂಧನದ ಬಳಿಕ ಕನಕಲಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಆತನ ವಿರುದ್ಧ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆ ಹಾಗೂ ವಿವಿಧ ಪ್ರಕರಣಗಳಲ್ಲಿ ಆತನ ನಿಜವಾದ ಪಾತ್ರವನ್ನು ಪೊಲೀಸ್ ತನಿಖೆಯೇ ಸ್ಪಷ್ಟಪಡಿಸಬೇಕಿದೆ.
🔎 ಬಂಧನದ ಬಳಿಕ ನಡೆಯುತ್ತಿರುವ ವಿಚಾರಣೆ ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡುವ ನಿರೀಕ್ಷೆ ಮೂಡಿಸಿದೆ.
🌐 ಇನ್ನಷ್ಟು ಸ್ಥಳೀಯ ಮತ್ತು ರಾಜ್ಯ ಸುದ್ದಿಗಳಿಗಾಗಿ ಭೇಟಿ ನೀಡಿ:
👉 www.karunaadutimes.com
ವರದಿ: ನವೀನ್ ಕುಮಾರ್