ಬೆಳಗಾವಿ: ಗಣೇಶ ಚತುರ್ಥಿಯ ಸಂಭ್ರಮದಲ್ಲಿದ್ದ ಬೆಳಗಾವಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವೊಂದು ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದಿದೆ. ನಗರದ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾವ್ಹಾಟ್ ಗಲ್ಲಿಯಲ್ಲಿ ತಡರಾತ್ರಿ ಈ ದುರಂತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 😔🔥
ತಡರಾತ್ರಿ ಮನೆಯಲ್ಲಿದ್ದ ಕುಟುಂಬಸ್ಥರು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಮನೆಗೆ ವ್ಯಾಪಿಸಿದ್ದು, ಮನೆಯೊಳಗಿದ್ದವರಿಗೆ ಹೊರಬರಲು ಸಾಧ್ಯವಾಗದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ.
ಈ ದುರ್ಘಟನೆಯಲ್ಲಿ ಗಜಾನನ ರಾಜಾರಾಮ ದಮೋನೆ (65), ಶಾರದಾ ದಮೋನೆ (45), ಭಾರತಿ ರಾಜಾರಾಮ ದಮೋನೆ (50) ಹಾಗೂ ರೋಷನ್ ಗಜಾನನ ದಮೋನೆ (21) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 🙏
🔥 ಹಬ್ಬದ ಸಂಭ್ರಮದ ನಡುವೆ ಕುಟುಂಬಕ್ಕೆ ಆಘಾತ
ಮೃತ ಕುಟುಂಬವು ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು ಎನ್ನಲಾಗಿದೆ. ಗಣೇಶ ಚತುರ್ಥಿಯ ಸಂಭ್ರಮದ ದಿನವೇ ಒಂದೇ ಕುಟುಂಬದ ನಾಲ್ವರು ಬೆಂಕಿ ಅವಘಡದಲ್ಲಿ ಮೃತಪಟ್ಟಿರುವುದು ಚಾವ್ಹಾಟ್ ಗಲ್ಲಿಯಲ್ಲಿ ಆಘಾತ ಮತ್ತು ದುಃಖದ ವಾತಾವರಣಕ್ಕೆ ಕಾರಣವಾಗಿದೆ.
ಮನೆಯಲ್ಲಿದ್ದ ವಸ್ತುಗಳು ಬೆಂಕಿಯ ತೀವ್ರತೆಗೆ ಸುಟ್ಟುಹೋಗಿದ್ದು, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಆತಂಕದಿಂದ ಸ್ಥಳಕ್ಕೆ ಧಾವಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಮಾರ್ಕೆಟ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಗ್ನಿ ಅವಘಡದ ನಿಖರ ಕಾರಣ ಸೇರಿದಂತೆ ಘಟನೆಗೆ ಸಂಬಂಧಿಸಿದ ಹಲವು ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
ಒಂದೆಡೆ ಗಣೇಶ ಹಬ್ಬದ ಸಂಭ್ರಮ... ಮತ್ತೊಂದೆಡೆ ಒಂದೇ ಕುಟುಂಬದ ನಾಲ್ಕು ಜೀವಗಳನ್ನು ಕಳೆದುಕೊಂಡ ಕಣ್ಣೀರಿನ ಕಥೆ. 💔
ಈ ದುರಂತದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಇಡೀ ಬಡಾವಣೆಯನ್ನೇ ಶೋಕದ ವಾತಾವರಣ ಆವರಿಸಿದೆ.
ವರದಿ: ನವೀನ್ ಕುಮಾರ್
🌐 ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಕ್ಷಣಕ್ಷಣದ ಅಪ್ಡೇಟ್ಗಳಿಗಾಗಿ ಭೇಟಿ ನೀಡಿ:
👉 www.karunaadutimes.com