ಬೆಳಗಾವಿ: ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಹಣಕಾಸು ವಂಚನೆ ಪ್ರಕರಣಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿರುವ ಶಿವಂ ಅಸೋಸಿಯೇಟ್ಸ್ ಹಗರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಅವರ ಆಸ್ತಿ ಮತ್ತು ಹಣಕಾಸು ದಾಖಲೆಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಯೂ ಆರಂಭವಾಗಿದೆ.
ಸಾವಿರಾರು ಹೂಡಿಕೆದಾರರಿಗೆ ಅಧಿಕ ಬಡ್ಡಿದರದ ಆಮಿಷ ಒಡ್ಡಿ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿರುವ ಆರೋಪದ ಮೇಲೆ ಶಿವಾನಂದ ನೀಲಣ್ಣನವರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಶನಿವಾರ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಆರ್ಬಿಐ, ಸೆಬಿ ಅನುಮತಿ ಇಲ್ಲದೇ ಹಣ ಸಂಗ್ರಹ?
ಪ್ರಾಥಮಿಕ ತನಿಖೆಯ ಪ್ರಕಾರ, ಶಿವಂ ಅಸೋಸಿಯೇಟ್ಸ್ ಸಂಸ್ಥೆ ಆರ್ಬಿಐ ಅಥವಾ ಸೆಬಿಯ ಯಾವುದೇ ಅನುಮೋದನೆ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ವಾರ್ಷಿಕ ಶೇ.36 ರಷ್ಟು ಬಡ್ಡಿ ನೀಡುವ ಭರವಸೆ ನೀಡಿ ಸಾರ್ವಜನಿಕರಿಂದ ಭಾರಿ ಪ್ರಮಾಣದ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿ ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಗುಲಾಬ್ರಾವ್ ಮಾಹಿತಿ ನೀಡಿದ್ದು, ಸಂಸ್ಥೆಯ ವಿರುದ್ಧ ಬಂದ ದೂರುಗಳ ಆಧಾರದ ಮೇಲೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೆಪಿಐಡಿ ಮತ್ತು ಬಡ್ಸ್ ಕಾಯ್ದೆಯಡಿ ಪ್ರಕರಣ
ಶಿವಂ ಅಸೋಸಿಯೇಟ್ಸ್ ವಿರುದ್ಧ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ ಕಾಯ್ದೆ (KPID) ಹಾಗೂ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (BUDS Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಅಧಿಕಾರಿಗಳು ಬೆಳಗಾವಿಯ ಶಿವಬಸವನಗರದಲ್ಲಿರುವ ಸಂಸ್ಥೆಯ ಕಚೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
35 ಸಾವಿರ ಹೂಡಿಕೆದಾರರು, ₹4,500 ಕೋಟಿ ಸಂಗ್ರಹ!
ಪ್ರಾಥಮಿಕ ಮಾಹಿತಿಯಂತೆ, ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ವಾರ್ಷಿಕ ಶೇ.36ರಷ್ಟು ಲಾಭದ ಆಮಿಷವೊಡ್ಡಿ ಸುಮಾರು ₹4,500 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ.
ಆದರೆ ನಿಖರ ಅಂಕಿಅಂಶಗಳು ಸಂಪೂರ್ಣ ಲೆಕ್ಕಪರಿಶೋಧನೆ ಬಳಿಕವೇ ಬಹಿರಂಗವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿ ಜಪ್ತಿಗೆ ಜಿಲ್ಲಾಡಳಿತ ಆದೇಶ
ಪ್ರಕರಣದ ಗಂಭೀರತೆಯನ್ನು ಗಮನಿಸಿ ಆರೋಪಿಗೆ ಸಂಬಂಧಿಸಿದ ಸ್ಥಿರಾಸ್ತಿ, ಬ್ಯಾಂಕ್ ಖಾತೆಗಳು ಮತ್ತು ಹಣಕಾಸು ದಾಖಲೆಗಳನ್ನು ಜಪ್ತಿ ಮಾಡುವ ಕಾರ್ಯಾಚರಣೆ ಆರಂಭಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ್, ಸಹಕಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಜಂಟಿ ತಂಡ ಕಳೆದ ಎರಡು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.
ನ್ಯಾಯಾಲಯಕ್ಕೆ ಹಾಜರು, ಪೊಲೀಸ್ ಕಸ್ಟಡಿಗೆ ಮನವಿ
ಬಂಧಿತ ಶಿವಾನಂದ ನೀಲಣ್ಣನವರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಹೂಡಿಕೆದಾರರಲ್ಲಿ ಆತಂಕ
ಸಾವಿರಾರು ಕುಟುಂಬಗಳ ಜೀವಿತ ಉಳಿತಾಯ ಈ ಸಂಸ್ಥೆಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿರುವುದರಿಂದ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ. ಪ್ರಕರಣದ ಸಂಪೂರ್ಣ ಸತ್ಯ ಹೊರಬೀಳಲು ಹಣಕಾಸು ವ್ಯವಹಾರಗಳ ಆಳವಾದ ತನಿಖೆ ನಡೆಯುತ್ತಿದೆ.