ಅಂದ್ರಪ್ರದೇಶ-ಹನುಮಕೊಂಡ: ರಾಜಕೀಯ ನಾಯಕನಾಗಿ ಮಾತ್ರವಲ್ಲ, ಮಾನವೀಯ ಮೌಲ್ಯಗಳಿಗೆ ಹೆಸರಾಗಿರುವ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಅವರು ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಪುಟ್ಟ ಅಭಿಮಾನಿಯ ಕನಸನ್ನು ನನಸಾಗಿಸಿ ಎಲ್ಲರ ಮನ ಗೆದ್ದಿದ್ದಾರೆ.
ಹನುಮಕೊಂಡದಲ್ಲಿರುವ ನಿರಂಜನ್ ಎಂಬ ಬಾಲಕ ದೀರ್ಘಕಾಲದಿಂದ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗುವ ಆಸೆ ಹೊಂದಿದ್ದನು. ಈ ವಿಚಾರ ತಿಳಿದ ತಕ್ಷಣ ಉಪ ಮುಖ್ಯಮಂತ್ರಿ ಸ್ವತಃ ಬಾಲಕನ ಮನೆಗೆ ಭೇಟಿ ನೀಡಿ ಆತನೊಂದಿಗೆ ಸಮಯ ಕಳೆಯುವ ಮೂಲಕ ಮಾನವೀಯತೆಯ ಮಾದರಿಯಾಗಿದ್ದಾರೆ.
ಭೇಟಿಯ ವೇಳೆ ನಿರಂಜನ್ ಆರೋಗ್ಯದ ಕುರಿತು ಕುಟುಂಬ ಸದಸ್ಯರಿಂದ ಮಾಹಿತಿ ಪಡೆದ ಪವನ್ ಕಲ್ಯಾಣ್, ಧೈರ್ಯ ತುಂಬಿ ಚಿಕಿತ್ಸೆಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಬಾಲಕನ ಚಿಕಿತ್ಸಾ ವೆಚ್ಚಕ್ಕೆ ₹1 ಲಕ್ಷ ಆರ್ಥಿಕ ಸಹಾಯ ನೀಡಿ ಕುಟುಂಬದ ಸಂಕಷ್ಟದಲ್ಲಿ ಕೈಜೋಡಿಸಿದರು.
ಈ ಸಂದರ್ಭದಲ್ಲಿ ನಿರಂಜನ್ಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಪ್ರಸಾದವನ್ನು ನೀಡಿ ಆಶೀರ್ವದಿಸಿದ ಪವನ್ ಕಲ್ಯಾಣ್, ಬಾಲಕ ಶೀಘ್ರ ಗುಣಮುಖನಾಗಲಿ ಎಂದು ಪ್ರಾರ್ಥಿಸಿದರು. ಕುಟುಂಬದವರೊಂದಿಗೆ ಆತ್ಮೀಯವಾಗಿ ಮಾತನಾಡಿದ ಅವರು, ಯಾವುದೇ ಸಹಾಯ ಬೇಕಾದರೂ ತಿಳಿಸುವಂತೆ ಸೂಚಿಸಿದರು.
ಪುಟ್ಟ ಅಭಿಮಾನಿಯ ಕನಸನ್ನು ನನಸಾಗಿಸಿದ ಈ ಭೇಟಿ ಕುಟುಂಬದವರಿಗೆ ಹೊಸ ಆತ್ಮಸ್ಥೈರ್ಯ ನೀಡಿದ್ದು, ಸ್ಥಳೀಯರು ಹಾಗೂ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪವನ್ ಕಲ್ಯಾಣ್ ಅವರ ಈ ಮಾನವೀಯ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.