ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ಸುತ್ತ ನಡೆಯುತ್ತಿರುವ ಚರ್ಚೆಗಳ ನಡುವೆ ತಮ್ಮ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ Prakash Raj ಸ್ಪಷ್ಟನೆ ನೀಡಿದ್ದಾರೆ. ಚಿನ್ನಯ್ಯ ಎಂಬ ವ್ಯಕ್ತಿಯೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದು ನಿಜವಾದರೂ, ಪ್ರಕರಣದೊಂದಿಗೆ ತಮ್ಮ ಯಾವುದೇ ನಂಟಿಲ್ಲ ಎಂದು ಅವರು ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, “ಚಿನ್ನಯ್ಯ ನನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ್ದ. ಆತ ತನ್ನನ್ನು ಪರಿಚಯಿಸಿಕೊಂಡು ಭೇಟಿಯಾಗಲು ಬಯಸಿದ್ದ. ಆದರೆ ನಾನು ಭೇಟಿಗೆ ಒಪ್ಪದೇ, ಹೇಳಬೇಕಾದ ವಿಷಯವಿದ್ದರೆ ಅದನ್ನು ದಾಖಲಿಸಿ ಕಳುಹಿಸುವಂತೆ ಸೂಚಿಸಿದ್ದೆ” ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನೀಡಲಾದ ಕೆಲವು ಹೇಳಿಕೆಗಳಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾನು ಎಂದಿಗೂ ಧರ್ಮಸ್ಥಳಕ್ಕೆ ಹೋಗಿಲ್ಲ. ಪ್ರಕರಣದಲ್ಲಿ ಉಲ್ಲೇಖವಾಗಿರುವ ಕೆಲ ವ್ಯಕ್ತಿಗಳನ್ನು ನಾನು ಭೇಟಿಯಾಗಿಯೂ ಇಲ್ಲ. ಹೀಗಿರುವಾಗ ನನ್ನ ಹೆಸರನ್ನು ಈ ಪ್ರಕರಣದೊಂದಿಗೆ ಜೋಡಿಸುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.
ಪ್ರಕರಣದ ಗಂಭೀರತೆಯನ್ನು ಗಮನಿಸಿ ಸ್ವತಂತ್ರ ತನಿಖೆ ಅಗತ್ಯವೆಂದು ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಸಾರ್ವಜನಿಕ ಹಿತದೃಷ್ಟಿಯಿಂದ ತನಿಖೆ ನಡೆಯಬೇಕು ಎಂಬುದೇ ನನ್ನ ನಿಲುವು ಎಂದು ಅವರು ಹೇಳಿದರು.
ಚಿನ್ನಯ್ಯನಿಂದ ಕರೆ ಬಂದ ವಿಚಾರವನ್ನು ತನಿಖಾಧಿಕಾರಿಗಳಿಗೆ ತಿಳಿಸಿದ್ದೇನೆ. ಕಾನೂನು ಪ್ರಕ್ರಿಯೆ ನಡೆಯುತ್ತಿರುವುದರಿಂದ ಹೆಚ್ಚಿನ ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಪ್ರಕಾಶ್ ರಾಜ್ ಮನವಿ ಮಾಡಿದರು.