ದಾವಣಗೆರೆ: ಆರೋಗ್ಯ, ಫಿಟ್ನೆಸ್ ಮತ್ತು ಕಠಿಣ ಶ್ರಮಕ್ಕೆ ಮತ್ತೊಂದು ಹೆಸರು ಎಂದೇ ಗುರುತಿಸಿಕೊಂಡಿದ್ದ ರಾಷ್ಟ್ರಮಟ್ಟದ ಬಾಡಿಬಿಲ್ಡರ್ ಸುಶೀಲ್ ಕುಮಾರ್ (26) ಅಕಾಲಿಕವಾಗಿ ನಿಧನರಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಮ್ನಲ್ಲಿ ನಿಯಮಿತ ತರಬೇತಿ ಮುಗಿಸಿ ಮನೆಗೆ ಮರಳಿದ್ದ ಅವರು, ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದಾವಣಗೆರೆಯ ಕೆಟಿಜೆ ಬಡಾವಣೆ ನಿವಾಸಿಯಾಗಿದ್ದ ಸುಶೀಲ್ ಕುಮಾರ್, ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ತಮ್ಮ ಶಿಸ್ತಿನ ಜೀವನಶೈಲಿ ಹಾಗೂ ಕ್ರೀಡಾ ಸಾಧನೆಗಳ ಮೂಲಕ ಯುವಕರಿಗೆ ಮಾದರಿಯಾಗಿದ್ದ ಅವರು, ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಗುರಿಯೊಂದಿಗೆ ತಯಾರಿ ನಡೆಸುತ್ತಿದ್ದರು.
ಸಾವಿಗೂ ಮುನ್ನ ನಡೆದಿದ್ದೇನು?
ಮಂಗಳವಾರ ಸಂಜೆ ಎಂದಿನಂತೆ ಜಿಮ್ಗೆ ತೆರಳಿದ್ದ ಸುಶೀಲ್ ಕುಮಾರ್, ರಾತ್ರಿ ಸುಮಾರು 8.30ರ ವೇಳೆಗೆ ಮನೆಗೆ ಹಿಂದಿರುಗಿದ್ದರು. ಬಳಿಕ ಕುಟುಂಬ ಸದಸ್ಯರೊಂದಿಗೆ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ದಿಢೀರ್ ಅಸ್ವಸ್ಥಗೊಂಡು ನೆಲಕ್ಕೆ ಬಿದ್ದಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗ ಮಧ್ಯೆಯೇ ಹೃದಯ ಸಂಬಂಧಿತ ತೊಂದರೆಯಿಂದ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕ್ರೀಡಾ ವಲಯದಲ್ಲಿ ಶೋಕ
ಕಿರಿಯ ವಯಸ್ಸಿನಲ್ಲೇ ಗಮನಾರ್ಹ ಸಾಧನೆ ಮಾಡಿದ್ದ ಸುಶೀಲ್ ಕುಮಾರ್ ಅವರ ನಿಧನ ಸುದ್ದಿ ದಾವಣಗೆರೆ ಸೇರಿದಂತೆ ರಾಜ್ಯದ ಬಾಡಿಬಿಲ್ಡಿಂಗ್ ಹಾಗೂ ಕ್ರೀಡಾ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಅವರ ಸ್ನೇಹಿತರು, ತರಬೇತುದಾರರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು, ಭವಿಷ್ಯದ ಭರವಸೆಯ ಕ್ರೀಡಾಪಟುವನ್ನು ಕಳೆದುಕೊಂಡಿರುವುದಾಗಿ ಕಂಬನಿ ಮಿಡಿದಿದ್ದಾರೆ.